VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ರೇಡಿಯೋ ಪಾಂಚಜನ್ಯ ಲೋಕಾರ್ಪಣೆ – ಪಾಂಚಜನ್ಯದ ಹೆಸರೇ ರೋಮಾಂಚನಕಾರಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಪುತ್ತೂರು : ಪಾಂಚಜನ್ಯದ ಹೆಸರನ್ನು ಕೇಳುವಾಗ ಭಗವಾನ್ ಶ್ರೀಕೃಷ್ಣ ಅಂತರಂಗಕ್ಕೆ ಬರುತ್ತಾನೆ. ಅಂತಹ ಪವಿತ್ರವಾದ ಹೆಸರದು. ಅದನ್ನು ಕೇಳುವಾಗ ದೈವಿಕವಾದ ಅನುಭವವೊಂದು ನಮ್ಮದಾಗುತ್ತದೆ. ಹೀಗಿರುವಾಗ ಅದೇ ಹೆಸರಿನಲ್ಲಿ ಬಾನುಲಿ ಕೇಂದ್ರವೊಂದನ್ನು ಪ್ರಾರಂಭಿಸಿರುವುದು ರೊಮಾಂಚನಕಾರಿ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಮನ್ ಕಿ ಬಾತ್ ಮುಖೇನ ಜನಮನವನ್ನು ತಲುಪುತ್ತಿದ್ದಾರೆ. ಈಗ ಈ ಭಾಗದ ಸುತ್ತಮುತ್ತಲಿನ ಮಂದಿಯೂ ತಮ್ಮ ಮನದ ಮಾತುಗಳನ್ನು ಈ ಬಾನುಲಿ ಕೇಂದ್ರದ ಮೂಲಕ ಹೇಳುವುದಕ್ಕೆ ಸಾಧ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯವನ್ನು ಉದ್ಘಾಟಿಸಿ ತಮ್ಮ ಮನದ ಮಾತುಗಳನ್ನು ರೇಡಿಯೋದಲ್ಲಿ ಗುರುವಾರ ಹಂಚಿಕೊಂಡರು.

News Photo - Panchajanya Inauguration

ಸ್ವಾಮಿ ವಿವೇಕಾನಂದರ ಹೆಸರೇ ನಮ್ಮಲ್ಲೊಂದು ಸಂಚಲನ ಮೂಡಿಸುವಂಥಾದ್ದು. ಅಂತಹವರ ಆದರ್ಶವನ್ನು ಮುಂದಿಟ್ಟುಕೊಂಡು ಜ್ಞಾನ ಪ್ರಸರಣ, ಶಿಕ್ಷಣ ಪ್ರಸರಣ ಕಾಯಕದಲ್ಲಿ ನಿರತವಾಗಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಈ ರೇಡಿಯೋವನ್ನು ಪ್ರಾರಂಭಿಸುವುದರ ಮೂಲಕ ದಾಖಲೆ ಮೆರೆದಿದೆ ಎಂದರಲ್ಲದೆ ಕೇಂದ್ರದ ಸಿಗ್ನೇಚರ್ ಟ್ಯೂನ್ ಮನೋಜ್ಞವಾಗಿದೆ ಎಂದು ಪ್ರಶಂಸಿಸಿದರು.

ಸ್ಥಳೀಯ ಭಾಷೆಯ ಸೊಗಡನ್ನು ಜಗತ್ತಿನ ಯಾವ ರಾಷ್ಟ್ರೀಯ ಭಾಷೆಗಳೂ ಒದಗಿಸಲಾರವು. ಹಾಗಾಗಿ ನಮ್ಮ ನಮ್ಮ ಮಾತೃಭಾಷೆಯಲ್ಲಿ ನಾವು ಸ್ಪಷ್ಟವಾಗಿ ಮಾಹಿತಿ ವಿನಿಮಯ ಮಾಡುವುದಕ್ಕೆ ತಜ್ಞರಾಗಬೇಕು. ಈ ಬಾನುಲಿ ಕೇಂದ್ರ ನಾನಾ ಬಗೆಯ ಸ್ಥಳೀಯ ಭಾಷೆಗಳಿಗೆ ಆದ್ಯತೆ ಕೊಡುತ್ತಿರುವುದು ಹಾಗೂ ಕೃಷಿ, ವಾಣಿಜ್ಯ, ಹೈನುಗಾರಿಕೆ, ಮಾಹಿತಿ ಹೀಗೆ ವೈವಿಧ್ಯಮಯ ಕಾರ್ಯಕ್ರಮ ನೀಡುವ ಉದ್ದೇಶ ಹೊಂದಿರುವುದು ಸ್ವಾಗತಾರ್ಹ. ದೇಶದ ನೂರ ತೊಂಬತ್ತಾರು ಹಾಗೂ ರಾಜ್ಯದ ಹದಿನಾರು ಸಮುದಾಯ ಬಾನುಲಿ ಕೇಂದ್ರಗಳಲ್ಲೊಂದಾದ ಈ ಪಾಂಚಜನ್ಯ ಸಮರ್ಥವಾಗಿ ಮೊಳಗಲಿ ಎಂದು ಹಾರೈಸಿದರು.

ರೇಡಿಯೋ ಪಾಂಚಜನ್ಯದ ಕಾರ್ಯವೈಖರಿ ಬಗೆಗೆ ವಿವೇಕಾನಂದ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನಿರ್ಧೇಶಕ ವಾಮನ ಪೈ, ಡಾ,. ಕಮಲಾ ಪ್ರಭಾಕರ ಭಟ್, ಪಾಂಚಜನ್ಯ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ, ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ, ಸದಸ್ಯ ಬಿ.ಟಿ.ರಂಜನ್, ಸಿಗ್ನೇಚರ್ ಹಾಡು ಬರೆದ ಕವಿ ಸುಬ್ರಾಯ ಚೊಕ್ಕಾಡಿ ಮತ್ತಿತರರು ಉಪಸ್ಥಿತರಿದ್ದರು.