ಆರಕ್ಷಕರು ಸಮಾಜದ ಸ್ನೇಹಿತರು: ಡಾ.ಶರಣಪ್ಪ
ಪುತ್ತೂರು: ಯುವಕರಿಗೆ ನೇತೃತ್ವವನ್ನು ವಹಿಸಲು ಹಿಂಜರಿಕೆಯಿದೆ. ಸಮಾಜದ ದುಷ್ಕಾರ್ಯಗಳನ್ನು ತಡೆಯುವಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯವಾದದ್ದು. ಆರಕ್ಷಕರು ಸಮಾಜದ ಸ್ನೇಹಿತರೇ ಹೊರತು ಶತೃಗಳಲ್ಲ. ಕೆಟ್ಟ ಕಾರ್ಯ ಎಸಗುವವರಿಗೆ ಮಾತ್ರ ಪೊಲೀಸರ ಬಗೆಗೆ ಭಯ ಇದ್ದರೆ ಸಾಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮಹಾ ಅಧೀಕ್ಷಕ ಡಾ.ಶರಣಪ್ಪ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ರೆಡ್ ಎಫ್.ಎಂ ೯೩.೫, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಅನ್ಯಾನ್ಯ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ರೆಡ್ ಸುರಕ್ಷಾ ಅಭಿಯಾನ್ ಎಂಬ ಅಪರಾಧ ತಡೆ ಬಗೆಗಿನ ಪ್ರಹಸನ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಇತ್ತೀಚೆಗೆ ಮಾತನಾಡಿದರು.
ಕರ್ನಾಟಕದಲ್ಲಿ ಸುಮಾರು ತೊಂಬತ್ತೈದು ಸಾವಿರ ಪೊಲೀಸರಿದ್ದಾರೆ. ದಕ್ಷಿಣ ಕನ್ನಡದಲ್ಲಿ ಸಾವಿರದ ಎಂಟುನೂರರಷ್ಟು ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರಲ್ಲದೆ ಸಮಾಜದಲ್ಲಿ ಅಪರಾಧ ಕೃತ್ಯ ಎಸಗುವವರ ಸಂಖ್ಯೆ ತೀರಾ ಕಡಿಮೆ. ಕೇವಲ ಮೂರರಿಂದ ಐದು ಶೇಕಡಾದಷ್ಟು ಮಂದಿ ದುಷ್ಕಾರ್ಯ ಎಸಗುವವರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಮಾಧವ ಭಟ್ ಮಾತನಾಡಿ ಪ್ರತಿಯೊಬ್ಬರೂ ಉತ್ತಮ ಬದುಕನ್ನು ನಿರೀಕ್ಷಿಸುತ್ತಾರೆ. ಹೀಗಿರುವಾಗ ಸಮಾಜದ ರಕ್ಷಣೆಯಲ್ಲಿ ಕೈಜೋಡಿಸುವುದು ಪ್ರತಿಯೊಬ್ಬರ ಜವಾಬ್ಧಾರಿಯೂ ಆಗಿರುತ್ತದೆ ಎಂದರಲ್ಲದೆ ಪೊಲೀಸರು ಸಮಾಜದಲ್ಲಿ ನೇತೃತ್ವ ವಹಿಸಬಲ್ಲ ಸ್ತಾನದಲ್ಲಿದ್ದಾರೆ. ಅವರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಶೇಖರಪ್ಪ, ಬಂಟ್ವಾಳ ಉಪ ವಿಭಾಗದ ಎಎಸ್‌ಪಿ ರಾಹುಲ್ ಕುಮಾರ್, ಸಿನೆಮಾ ನಟರುಗಳಾದ ಕಿರಣ್, ರಕ್ಷಾ ಶೆಣೈ, ನವ್ಯಾ ಹಾಗೂ ರೆಡ್ ಎಫ್.ಎಂ ನ ನಿರ್ವಾಹಕ ಶೋಭಿತ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಹಸನ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಉಜಿರೆಯ ಎಸ್.ಡಿ.ಎಂ ಕಾಲೇಜು ಪಡೆದರೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು.
ರೆಡ್ ಎಫ್.ಎಂ ನ ಆರ್‌ಜೆ ಪ್ರಸನ್ನ ಸ್ವಾಗತಿಸಿ ವಂದಿಸಿದರು. ಆರ್‌ಜೆ ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.