ವಿವೇಕಾನಂದದಲ್ಲಿ ಅಪರಾಧ ತಡೆ ಪ್ರಹಸನ ಸ್ಪರ್ಧೆ – ಸುರಕ್ಷೆ ನಮ್ಮ ಆದ್ಯತೆಯಾಗಬೇಕು: ಬಸವರಾಜ್
ಪುತ್ತೂರು: ಸಮಾಜದಲ್ಲಿ ಸುರಕ್ಷತೆ ಬಹಳಷ್ಟು ಮುಖ್ಯ. ಇತ್ತೀಚೆಗೆ ಮಾಧ್ಯಮಗಳನ್ನು ನೋಡುವಾಗ ನಮ್ಮ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಗಳೆರಡೂ ಅತ್ಯಂತ ಪ್ರಾಮುಖ್ಯವಾದದ್ದೆಂದು ಗೊತ್ತಾಗುತ್ತದೆ. ನಮ್ಮನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೆ ದೇಶವನ್ನೂ ಸಂರಕ್ಷಿಸಿಡಬೇಕಾದದ್ದು ಅಗತ್ಯ ಎಂದು ಪುತ್ತೂರಿನ ಸಹಾಯಕ ಆಯುಕ್ತ ಬಸವರಾಜ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ರೆಡ್ ಎಫ್.ಎಂ ೯೩.೫, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಅನ್ಯಾನ್ಯ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ರೆಡ್ ಸುರಕ್ಷಾ ಅಭಿಯಾನ್ ಎಂಬ ಅಪರಾಧ ತಡೆ ಬಗೆಗಿನ ಪ್ರಹಸನ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಸ್.ಪಿ. ಶೇಖರಪ್ಪ ಮಾತನಾಡಿ ನಮ್ಮ ಸುತ್ತ ಮುತ್ತ ಅನೇಕ ಪ್ರಕರಣಗಳಾಗುತ್ತಿದ್ದರೂ ಹಲವು ಪ್ರಕರಣಗಳನ್ನು ದಾಖಲಿಸುವುದಕ್ಕೆ ಜನ ಮನಮಾಡುತ್ತಿಲ್ಲ. ಇಂದಿನ ಕಾನೂನು ಕಟ್ಟಳೆಗಳು ಬಿಗಿಯಾಗಿವೆ. ಹಾಗೆಂದು ನಮ್ಮ ಜಾಗರೂಕತೆಯಿಂದ ನಾವಿರಬೇಕು. ಬಂಗಾರವನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್‌ನ ಲಾಕರ್‌ನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ ನಮ್ಮ ಸಾಮಾಜಿಕ ಜವಾಬ್ಧಾರಿಗಳನ್ನು ಅರಿಯುವುದು ಅತ್ಯಂತ ಅಗತ್ಯವಾದುದು. ನಮ್ಮ ಸೋಮಾರಿತನ, ನಿರ್ಲಕ್ಷದಿಂದಾಗಿಯೇ ಅನೇಕ ಪ್ರಕರಣಗಳು ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಯುವ ಜನಾಂಗ ಅಪರಾಧಕ್ಕೆ ಕಾರಣವಾಗುವುದು ಮಾತ್ರವಲ್ಲ, ಬಲಿಪಶುಗಳಾಗುವುದೂ ಇದೆ. ಈ ಹಿನ್ನಲೆಯಲ್ಲಿ ಅಂತಹ ಜನರಿಗೇ ಮಾಹಿತಿ ಕೊಟ್ಟು ಅಪರಾಧದ ಬಗೆಗೆ ಜ್ಞಾನ ಮೂಡಿಸುವುದು ಸ್ವಾಗತಾರ್ಹ ಎಂದು ನುಡಿದರು.
ವೇದಿಕೆಯಲ್ಲಿ ಐಪಿಎಸ್ ಅಧಿಕಾರಿ ಸುಮಂತಿ ಪೆರ್ನೇಕರ್, ಡಿವೈಎಸ್‌ಪಿ ಭಾಸ್ಕರ ರೈ, ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್ ಹಾಗೂ ರೆಡ್ ಎಫ್.ಎಂನ ಕಾರ್ಯಕ್ರಮ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಶೃತಿ ಹಾಗೂ ಶ್ರೀದೇವಿ ಪ್ರಾರ್ಥಿಸಿದರು. ಮಂಗಳೂರಿನ ರೆಡ್ ಎಫ್.ಎಂ.ನ ಆರ್‌ಜೆ ಅನುರಾಗ್ ಸ್ವಾಗತಿಸಿದರು. ಅರ್‌ಜೆ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.