VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ವಿದ್ಯಾರ್ಥಿಯೇ : ಸುಭಾಷ್ ಪಟ್ಟಾಜೆ

ಪುತ್ತೂರು : ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ವಿದ್ಯಾರ್ಥಿಯೇ. ನಿರಂತರ ಕಲಿಕೆಯಲ್ಲಿ ಅನೇಕ ವಿಷಯಗಳು ಅರಿವಿಲ್ಲದಂತೆಯೇ ನಮ್ಮ ಕಥೆಕವನಗಳಿಗೆ ವಸ್ತುಗಳಾಗಿ ಬಿಡುತ್ತವೆ. ನಮ್ಮ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಕ್ರಿಯಾತ್ಮಕತೆಯನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ  ಕನ್ನಡ ವಿಭಾಗದ ಉಪನ್ಯಾಸಕ ಸುಭಾಷ್ ಪಟ್ಟಾಜೆ ಹೇಳಿದರು.

     ಅವರು ವಿವೇಕಾನಂದ ಪದವಿ ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪಸಾಹಿತ್ಯ ಪ್ರಿಯ ಮನಗಳ ಸಂಮಿಲನ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.

ನೋವು, ತಲ್ಲಣ, ಬದುಕಿನ ಸಂಘರ್ಷ, ಸಂಕೀರ್ಣತೆ, ಆದರ್ಶವಾದ ಚಿಂತನೆ, ಸಾತ್ವಿಕ ರೋಷ, ಸಾಮಾಜಿಕ ಜಾಗೃತಿ ಮುಂತಾದವು ಈಗಿನ ಸಾಹಿತ್ಯದಲ್ಲಿ ಕಾಣ ಬರುವ ಮುಖ್ಯ ಅಂಶಗಳು. ಹೊಸ ವಿಚಾರಧಾರೆಗಳಿಗೆ ರಚನಾತ್ಮಕ ಸ್ಪಂದನೆ ದೊರೆಯಬೇಕು. ಹಾಗೆಂದು ಸಂಬಂಧಗಳ ಮೇಲಿನ ಪ್ರೀತಿಯ ಸೆಲೆ ಬತ್ತಬಾರದು. ಸಾಹಿತ್ಯ ಎಂಬುದು ಪದಗಳೊಂದಿಗಿನ ಚೆಲ್ಲಾಟ. ಮನಸ್ಸಿನ ಅಭಿವ್ಯಕ್ತಿಗೆ ವೈಚಾರಿಕತೆಯ ಹೊಳಪನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ  ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ್ ಮಾತನಾಡಿ, ಸಾಹಿತ್ಯ ರಚನೆಗೆ ಸ್ಪೂರ್ತಿ ಇಂತಲ್ಲೇ ಸಿಗಬಹುದು ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸಿಕ್ಕಾಗ ಅದನ್ನು ಪಡೆದುಕೊಳ್ಳಲು ನಾವು ಸದಾ ಸಿದ್ಧರಿರಬೇಕು. ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಿಗುವ ಅವಕಾಶಗಳು ಬಹಳ. ಆದರೆ ಅವುಗಳನ್ನು ಬಳಸಿಕೊಳ್ಳುವ ಜಾಣತನ ನಮಗಿರಬೇಕು. ಸೌಲಭ್ಯಗಳನ್ನು ಉಪಯುಕ್ತಗೊಳಿಸಿಕೊಳ್ಳುವ ಕಲೆ ತಿಳಿದಿರಬೇಕು ಎಂದರು

     ಸಂದರ್ಭದಲ್ಲಿ ಸಾಹಿತ್ಯ ಮಂಟಪ ಕಾರ್ಯದರ್ಶಿ ಶ್ರೀನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಷ್ಣವಿ ಪೈ, ಸ್ವಾತಿ ಎಸ್., ಕಾವ್ಯ . ಆರ್., ಪ್ರತಿಮಾ ಭಟ್, ಅಂಜಲಿ ಕೆ. ಸ್ವರಚಿತ ಕವನಗಳನ್ನು ವಾಚಿಸಿದರು. ಕನ್ನಡ ವಿಭಾಗದ ಉಪನ್ಯಾಸಕ, ಸಾಹಿತ್ಯ ಮಂಟಪದ  ಸಂಯೋಜಕ ಡಾ. ಮನಮೋಹನ ಸ್ವಾಗತಿಸಿ, ವಿದ್ಯಾರ್ಥಿನಿ ದಿವ್ಯಾ ವಂದಿಸಿದರು. ಶಿವ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.