ಸಾಮಾನ್ಯ ಮಂದಿಗೂ ಸಾಧನೆ ಸಾಧ್ಯ: ಡಾ.ರವೀಂದ್ರನಾಥ ಶಾನುಭೋಗ್
ಪುತ್ತೂರು: ಸಮಾಜ ಸೇವೆ ಮಾಡುವುದಕ್ಕೆ ಶಾಸಕ, ಸಂಸದನಾಗಬೇಕೆಂದೇನೂ ಇಲ್ಲ. ಸಾಮಾನ್ಯ ನಾಗರಿಕನೂ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯ. ಜನ ನಾಯಕರಲ್ಲಿರುವುದು ವಹಿಸಿ ಕೊಟ್ಟ ಅಧಿಕಾರ ಮಾತ್ರ. ಆದರೆ ಈ ದೇಶದ ನಾಗರಿಕರಲ್ಲಿ ಸಹಜವಾದ ಮತ್ತು ಶಾಶ್ವತವಾದ ಅಧಿಕಾರವಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ನಾಯಕರೆನಿಸಿಕೊಂಡವರಿಗಿಂತ ಮಿಗಿಲಾದ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂದು ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭೋಗ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಸಹಯೋಗದೊಂದಿಗೆ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾದ ಯು.ಜಿ.ಸಿ ಪ್ರಾಯೋಜಿತ ಮಾನವ ಹಕ್ಕುಗಳು : ಮಹಿಳೆಯರು, ಮಕ್ಕಳು ಮತ್ತು ರೈತರು ಎದುರಿಸುವ ಸವಾಲುಗಳು ಎಂಬ ವಿಷಯದ ಬಗೆಗಿನ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ಸಂದರ್ಭಗಳಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರ ಜನರ ಹಕ್ಕೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. ಯಾವ ಪರಿಹಾರವೂ ಭಿಕ್ಷೆ ಅಲ್ಲ. ಯಾವಾಗ ಪ್ರತಿಯೊಬ್ಬ ವ್ಯಕ್ತಿಯೂ ಸವಾಲುಗಳನ್ನು ಎದುರಿಸುವ ಮನೋಬಲ ಹೊಂದುತ್ತಾನೆಯೋ ಆಗ ಸಮಾಜ ಸದೃಢಗೊಳ್ಳುತ್ತದೆ. ನಮ್ಮ ಪೂರ್ವಜರಿಂದ ಈ ದೇಶ ನಮ್ಮ ತಲೆಮಾರಿಗೆ ಹಸ್ತಾಂತರಿಸುವ ಹೊತ್ತಿಗೆ ಈ ದೇಶ ಚೆನ್ನಾಗಿಯೇ ಇತ್ತು. ಆದರೆ ನಾವು ಮುಂದಿನ ಜನಾಂಗಕ್ಕೆ ರಾಷ್ಟ್ರವನ್ನು ಹಸ್ತಾಂತರಿಸುವ ಹೊತ್ತಿಗೆ ಈ ದೇಶ ಹಾಳಾಗುತ್ತಿದೆ ಎಂಬುದನ್ನು ಗಮನಿಸಬೇಕು ಎಂದರು.
ಮುಂದಿನ ಜನಾಂಗಕ್ಕೆ ಉತ್ತಮ ರಾಷ್ಟ್ರವನ್ನು ಬಿಟ್ಟುಕೊಡುವುದು ನಮ್ಮ ಕರ್ತವ್ಯ. ಆದರೆ ನಾವು ಬೇಜವಾಬ್ಧಾರಿಯಿಂದ ಕೊಳಕು ಪರಿಸ್ಥಿತಿ ನಿರ್ಮಾಣ ಮಾಡಿ ಹೋಗುತ್ತಿದ್ದೇವೆ. ನಾಳೆಯ ದಿನ ಉತ್ತಮ ವಾತಾವರಣವನ್ನು ನಮ್ಮ ಮಕ್ಕಳಿಗೆ ನೀಡಲಾರದ ಪರಿಸ್ಥಿತಿಗೆ ನಾವು ತಲಪಿದ್ದೇವೆ ಎಂದು ವಿಷಾಧಿಸಿದರಲ್ಲದೆ ಕೊನೆ ಪಕ್ಷ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನವನ್ನಾದರೂ ಪಡೋಣ ಎಂದು ಹೇಳಿದರು.
ಹೋರಾಟ ಅಂದ ಕೂಡಲೇ ನಾವು ಬೀದಿಗಿಳಿಯುವುದನ್ನು, ಕಲ್ಲು ಹೊಡೆಯುವುದನ್ನು, ಸತ್ಯಾಗ್ರಹ ಕೂರುವುದನ್ನೇ ಮಾದರಿಯಾಗಿ ಸ್ವೀಕರಿಸುತ್ತೇವೆ. ಇದ್ಯಾವುದನ್ನೂ ಮಾಡದೆ ಗೆಲುವನ್ನು ಕಾಣುವುದಕ್ಕೆ ಸಾಧ್ಯ ಎಂಬುದನ್ನು ಅರಿಯಬೇಕು. ತಪ್ಪೊಂದು ಸಂಭವಿಸಿದಾಗ ಒಂಧೋ ನಾವು ಸುಮ್ಮನಿದ್ದುಬಿಡುತ್ತೇವೆ. ಇಲ್ಲವೇ ತೀರಾ ಭಾವನೆಗಳ ತುರೀಯಾವಸ್ಥೆಗೆ ತಲಪಿ ಸಮಾಜದ ಸ್ವಾಸ್ಥ್ಯ ಕೆಡುವಂತಹ ಕಾರ್ಯಗಳಲ್ಲಿ ತೊಡಗುತ್ತೇವೆ. ಇವೆರಡರ ಮಧ್ಯೆ ನಿಜವಾದ ಪ್ರಯತ್ನ ಮುಖೇನ ಗೆಲುವು ಪಡೆಯಬಹುದು ಎಂಬುದನ್ನು ಮರೆಯುತ್ತಿದ್ದೇವೆ ಎಂದು ನುಡಿದರು.
ಗೋಷ್ಟಿಯ ಅಧ್ಯಕ್ಷತೆಯನ್ನು ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕ ಪ್ರೊ.ವಿದ್ಯಾ ಶಂಕರ್ ಟಿ ವಹಿಸಿದ್ದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ಪಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ಡಾ. ರೀಟಾ ನೊರೋನಾ, ಉಡುಪಿಯ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್‌ನ ಉಪಾಧ್ಯಕ್ಷ ಡಾ.ನಿತ್ಯಾನಂದ ಪೈ, ಹಾಗೂ ಪುತ್ತೂರಿನ ಮಾನವ ಹಕ್ಕುಗಳ ಕಾರ್ಯಕರ್ತ ಸಂಜೀವ ಗೌಡ ಗೋಷ್ಠಿಗಳನ್ನು ನಡೆಸಿಕೊಟ್ಟರು.
ಗೋಷ್ಠಿಗಳ ಅಧ್ಯಕ್ಷತೆಯನ್ನು ಕ್ರಮವಾಗಿ ವಿಟ್ಲದ ಜಿಎಂಎಫ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಝೆವಿಯರ್ ಡಿ.ಸೋಜಾ ಹಾಗೂ ಮಂಗಳೂರಿನ ಕೆನರಾ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಗಣೇಶ್ ಶೆಟ್ಟಿ ವಹಿಸಿದರು.