ಸಾಹಿತ್ಯ ಚಟುವಟಿಕೆಗಳಿಂದ ಬದುಕಿಗೊಂದು ಪರಿಪೂರ್ಣತೆ : ಹರಿಣಿ
ಪುತ್ತೂರು : ಕೇವಲ ಅಂಕವೊಂದಿದ್ದರೆ ಬದುಕಿಗೆ ಸಾಕಗುವುದಿಲ್ಲ. ಜೀವನ ಸಾಗಿಸಲು ಅನುಭವವೂ ಬೇಕಾಗುತ್ತದೆ. ವಿದ್ಯಾರ್ಥಿ ಜೀವನ ಕೇವಲ ಪಠ್ಯಕ್ಕೆ ಸೀಮಿತಗೊಳ್ಳಬಾರದು. ಸಾಹಿತ್ಯ ರಚನೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಬದುಕನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಗಣಕಶಾಸ್ತ್ರ ಉಪನ್ಯಾಸಕಿ ಹರಿಣಿ ಪುತ್ತೂರಾಯ ಹೇಳಿದರು.
ಅವರು ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.
ನಮ್ಮ ನೈಪುಣ್ಯತೆಯನ್ನು ಬೆಳೆಸಿಕೊಳ್ಳಲು ವೇದಿಕೆ ಸಿಕ್ಕಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬರೆಯುವ, ಓದುವ, ಕೇಳುವ ಹವ್ಯಾಸಗಳು ನಮ್ಮ ಯೋಚನಾ ಲಹರಿಯನ್ನು ಜಾಗೃತಗೊಳಿಸುತ್ತವೆ. ಇದರಿಂದ ಸಿಗುವ ವಿನೂತನ ಅನುಭವಗಳು ಮಾನವ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಉಪನ್ಯಾಸಕ ಡಾ. ರೋಹಿಣಾಕ್ಷ ಮಾತನಾಡಿ, ತಮ್ಮ ತಮ್ಮ ಅಭಿಪ್ರಾಯ, ಅನುಭವಗಳನ್ನು ವ್ಯಕ್ತ ಪಡಿಸಲು ಸಾಹಿತ್ಯವೂ ಒಂದು ವಿಧಾನ. ಇಲ್ಲಿ ಯಾರೂ ಪರಿಪೂರ್ಣರಲ್ಲ. ಹಾಗೆಂದು ನಗಣ್ಯರೂ ಅಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವವಿದೆ. ಸಾಹಿತ್ಯ ಭಾವನೆಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಒಂದು ಪ್ರಯತ್ನ ಎಂದು ಹೇಳಿದರು
ಕನ್ನಡ ಸಾಹಿತ್ಯ ಎಂಬುದು ಒಂದು ದೊಡ್ಡ ಸಾಗರವಿದ್ದಂತೆ. ಅದು ಎಂದಿಗೂ ಬತ್ತುವುದಿಲ್ಲ. ಏಕೆಂದರೆ ಯುವ ಬರಹಗಾರರೆಂಬ ಭರವಸೆಯ ತೊರೆಗಳು ಸದಾ ಆ ಸಮುದ್ರವನ್ನು ಸೇರುತ್ತಾ ಇರುತ್ತವೆ. ನದಿಯ ಉಗಮವಾಗುವುದು ಸಣ್ಣ ಬಿಂದುವಿನಿಂದ. ಆನಂತರ ಅದು ಪಕ್ವತೆ ಪಡೆಯ ತೊಡಗಿ ಧುಮ್ಮಿಕ್ಕಿ ಭೋರ್ಗರೆಯುತ್ತದೆ, ಜುಳು ಜುಳು ನಿನಾದ ಮಾಡುತ್ತದೆ, ಶಾಂತವಾಗಿಯೂ ಹರಿಯುತ್ತದೆ. ಅದೇ ರೀತಿ ಬರವಣಿಗೆ ಕೂಡ ಎಂದು ನುಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಉಪನ್ಯಾಸಕ, ಸಾಹಿತ್ಯ ಮಂಟಪದ ಸಂಯೋಜಕ ಡಾ. ಮನಮೋಹನ ಎಂ, ಸಾಹಿತ್ಯ ಮಂಟಪ ಕಾರ್ಯದರ್ಶಿ ಶ್ರೀನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನವ್ಯಶ್ರೀ, ಪ್ರಜ್ಞಾ ಕೆ., ರಾಮ್ ಮೋಹನ್ ಭಟ್ ಹೆಚ್., ಶ್ಯಾಮಲಾ ಎ., ವೈಷ್ಣವಿ ಪೈ, ಪ್ರಥಿಮಾ ಭಟ್ ಸ್ವರಚಿತ ಕವನ, ಲೇಖನಗಳನ್ನು ವಾಚಿಸಿದರು. ಅಂತಿಮ ಪದವಿ ವಿದ್ಯಾರ್ಥಿ ಶಿವಪ್ರಸಾದ್ ರೈ ಸ್ವಾಗತಿಸಿ, ವಿದ್ಯಾರ್ಥಿನಿ ಕಾವ್ಯಾ ಎ. ಆರ್ ವಂದಿಸಿದರು. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.