ಸಾಹಿತ್ಯ ರಚನಾ ಕಾರ್ಯ ಹೆಮ್ಮೆಯ ವಿಚಾರ : ಪ್ರೊ. ಬಿ. ವೆಂಕಟ್ರಮಣ ಭಟ್
ಪುತ್ತೂರು: ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಮೊಬೈಲ್ ಬಿಟ್ಟು ಬೇರೆ ಪ್ರಪಂಚವೇ ಇಲ್ಲ ಎಂಬ ಆಪಾದನೆಯನ್ನು ಹೊರಿಸುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸ್ವರಚಿತ ಕಥೆ-ಕಾವ್ಯಗಳನ್ನು ರಚಿಸುತ್ತಿರುವುದು ಹೆಮ್ಮೆಯ ವಿಷಯ. ಈಗಾಗಲೇ ಯಾರಿಂದಲೋ ರಚಿತವಾದ ಸಾಹಿತ್ಯವನ್ನು ಓದುವುದು ಕಷ್ಟವಲ್ಲ. ಆದರೆ ತಾನೇ ಕಥೆ-ಕಾವ್ಯವನ್ನು ರಚಿಸುವುದು ಅತೀ ಕಷ್ಟಕರ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ನಿರ್ವಾಹಣಾ ವಿಭಾಗದ ಮುಖ್ಯಸ್ಥ ಪ್ರೊ. ಬಿ. ವೆಂಕಟ್ರಮಣ ಭಟ್ ಹೇಳಿದರು. ಅವರು ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ – ಸಾಹಿತ್ಯ ಪ್ರಿಯ ಮನಗಳ ಸಂಮಿಲನ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.
ಕವಿರಾಜ ಮಾರ್ಗಕಾರನಾದ ಶ್ರೀವಿಜಯನು ಕನ್ನಡಿಗರು ಕುರಿತೋದಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಎಂದು ಹಳೆಗನ್ನಡ ಕಾಲಘಟ್ಟದಲ್ಲಿಯೆ ಕನ್ನಡಿಗರ ಹೆಮ್ಮೆಯನ್ನು ತಿಳಿಸಿದ್ದಾನೆ. ಕನ್ನಡಿಗರು ಶಾಸ್ತ್ರೋಕ್ತವಾಗಿ ಕಾವ್ಯವನ್ನು ಅಭ್ಯಸಿಸದೆಯೇ ಕಾವ್ಯ ಪ್ರಯೋಗವನ್ನು ಮಾಡುವಷ್ಟರ ಮಟ್ಟಿನ ಜ್ಞಾನವನ್ನು ಹೊಂದಿದವರು ಎಂದು ಹೇಳಿದ್ದಾನೆ. ಇದು ಕನ್ನಡಿಗರ ಹೆಮ್ಮೆ ಎಂದರು.
ಕೃಷಿಯೂ ಸಹ ಸಾಹಿತ್ಯದ ಭಾಗವೇ ಆಗಿದೆ. ಕೃಷಿಯು ನಶಿಸಿದಷ್ಟು ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದಾಗಿರುವ ಜನಪದ ಸಾಹಿತ್ಯವೂ ನಶಿಸುತ್ತದೆ. ಮಾತ್ರವಲ್ಲದೇ ತಾನು ಆರ್ಥಿಕತೆಯ ದೃಷ್ಟಿಯಿಂದ ಮಾತ್ರ ಕೃಷಿಯನ್ನು ಮುಂದುವರಿಸುತ್ತಿಲ್ಲ. ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವುದೇ ತನ್ನ ಮೂಲ ಧ್ಯೆಯ. ಇದರಿಂದಾಗಿ ಕೃಷಿಯನ್ನು ಮುಂದುವರಿಸುವ ಜೊತೆ ಜೊತೆಗೆ ಸಾಹಿತ್ಯ ಪ್ರಕಾರವನ್ನು ಉಳಿಸಿದಂತಾಗುವುದು ಎಂದು ನುಡಿದರು.
ವಿದ್ಯಾರ್ಥಿಗಳಾದ ಸಾಗರ್ ಹೆಗ್ಡೆ ನಾರಾವಿ ಹಾಸ್ಟೇಲ್ ಜೀವನದಿಂದಾಗಿ ತನ್ನ ತಂದೆ-ತಾಯಿಯರ ಪ್ರೀತಿಯಿಂದ ದೂರವಾದ ಮಗಳೊಬ್ಬಳ ಮನಸ್ಥಿತಿಯನ್ನು, ಮತ್ತು ಆಕೆ ಎದುರಿಸಬೇಕಾದ ಸಂಕಷ್ಟಗಳನ್ನು ಆಧರಿಸಿದ ಸ್ವರಚಿತ ಕಥೆಯನ್ನು ಹಾಗೂ ವಿನೋದ್ ಕುಮಾರ್ ಕಂದೂರು ಭಾಮಿನಿ ಷಟ್ಪದಿಯಲ್ಲಿ ಬರೆದ ರಾಜೇಶ್ವರಿ ಚರಿತೆ ಎಂಬ ಸ್ವರಚಿತ ಕಾವ್ಯವನ್ನು ವಾಚಿಸಿದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಗೀತಾ ಕುಮಾರಿ ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಮ್ಯ ಸ್ವಾಗತಿಸಿ, ವಿನುತಾ ನಿರೂಪಿಸಿದರು. ವಿದ್ಯಾರ್ಥಿ ಹರೀಶ್ ಭಟ್ ವಂದಿಸಿದರು.