ಅವಕಾಶವನ್ನು ಸೃಷ್ಟಿಸಬೇಕು : ರವಿಕಲಾ
ಪುತ್ತೂರು: ಕಲೆ ಮಾನವನಲ್ಲಿ ಅಡಕವಾಗಿರುವ ಪ್ರತಿಭೆಯಾಗಿದೆ. ತನ್ನೊಳಗೆ ಅಡಕವಾಗಿರುವ ಕಲೆಯನ್ನು ಹುಡುಕಿ ಬೆಳಕಿಗೆ ತಂದು ಪ್ರಸ್ತುತ ಪಡಿಸಬೇಕು. ಇದಕ್ಕಾಗಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಬೇಕು. ಅವಕಾಶ ಸಿಗದಿದ್ದರೆ ಬೇಸರ ಪಟ್ಟುಕೊಳ್ಳದೆ ತಾವೇ ಅವಕಾಶವನ್ನು ಸೃಷ್ಟಿಸಬೇಕು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕಿ ರವಿಕಲಾ ಹೇಳಿದರು.
ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುತ್ತಿರುವ ಸಾಹಿತ್ಯ ಮಂಟಪ -ಸಾಹಿತ್ಯ ಪ್ರಿಯ ಮನಗಳ ಸಂಮಿಲನ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.
ಕವನ ಮನಸ್ಸಿನ ಭಾವನೆಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆ. ಹಿಂದಿನ ಕಾಲದಲ್ಲಿ ದೇವಾಲಯಗಳಲ್ಲಿ ದೇವರನ್ನು ಸಾಕ್ಷಾತ್ಕರಿಸಲು, ರಾಜನ ಆಸ್ಥಾನದಲ್ಲಿ ಮನರಂಜನೆಯನ್ನು ನೀಡಲು ಕವನಗಳ ಬಳಕೆ ಇರುತ್ತಿತ್ತು. ಯಾವುದೇ ಸಿನಿಮಾಗಳು ಜನಜನಿತವಾಗಬೇಕಾದರೆ ಹಾಡು ಅತೀ ಅವಶ್ಯಕ. ಪ್ರತಿ ಯಶಸ್ವಿ ಸಿನಿಮಾಗಳ ಹಿಂದೆ ಬಳಕೆಯಾಗಿರುವ ಹಾಡು ಮಹತ್ವವನ್ನು ಪಡೆದಿದೆ ಎಂದು ತಿಳಿಸಿದರು.
ಜೀವನ ನಡೆಸುವ ಕಲೆ ಪ್ರತಿಯೊಬ್ಬನಿಗೂ ಅತೀ ಅವಶ್ಯಕವಾಗಿದ್ದು ಈ ಕಲೆಯನ್ನು ಕರಗತಗೊಳಿಸದ ಕಾರಣ ಇಂದಿನ ಸಮಾಜದಲ್ಲಿ ಆತ್ಮಹತ್ಯೆಯಂತಹ ಘಟನೆಗಳು ಹೆಚ್ಚುತ್ತಿವೆ. ಹುಟ್ಟು ಸಾವು ಜೀವನದ ಎರಡು ಘಟ್ಟಗಳು ಅದರ ನಡುವೆ ಸಾಧನೆಯನ್ನು ಮಾಡುವ ಮೂಲಕ ಸಾರ್ಥಕ್ಯವನ್ನು ಪಡೆಯಬೇಕು. ಸಾಧನೆ ಮಾಡದ ಪಕ್ಷದಲ್ಲಿ ನಕಾರಾತ್ಮಕವಾದ ಆಲೋಚನೆಗಳು ಮೂಡುತ್ತದೆ. ಅದಕ್ಕಾಗಿ ಜೀವನ ನಡೆಸುವ ಕಲೆಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಂಘದ ಸಂಯೋಜಕಿ ಡಾ. ಗೀತಾ ಕುಮಾರಿ ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಕ್ಷತಾ ಡಿ. ಸಾಲ್ಯಾನ್, ಅಝಾದ್ ಖಂಡಿಗ, ಅಕ್ಷತಾ ಜಿ., ಶರಣ್ಯ ಎನ್.ಎಸ್ ಸ್ವರಚಿತ ಕವನಗಳನ್ನು ವಾಚನ ಮಾಡಿದರು. ವಿದ್ಯಾರ್ಥಿನಿ ಅರ್ಪಿತಾ ಕೆ. ಸ್ವಾಗತಿಸಿ, ದಿಶಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ವಿನೋದ್ ಕುಮಾರ್ ಕಂದೂರು ವಂದಿಸಿದರು.