ಸಹ್ಯ ಸಮಾಜದ ನಿರ್ಮಾಣಕ್ಕೆ ಒಳ್ಳೆಯ ಸಾಹಿತ್ಯ ಅಗತ್ಯ: ವಿಠಲ ನಾಯಕ
ಪುತ್ತೂರು: ಯುವಕರು ಹಾದಿ ತಪ್ಪಲು ಒಳ್ಳೆಯ ಸಾಹಿತ್ಯದ ಕೊರತೆಯೂ ಕೂಡ ಒಂದು ಕಾರಣ. ಜೀವನ ಶೈಲಿ ಬದಲಾದಂತೆ ನಮ್ಮ ಸಾಹಿತ್ಯದಲ್ಲೂ ಅಪಾಯಕಾರಿಯೆನಿಸುವಷ್ಟು ಬದಲಾವಣೆಯಾಗುತ್ತಿದೆ ಆಧುನಿಕ ತಂತ್ರಜ್ಞಾನಗಳು ನಮ್ಮ ಜೀವನಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದು ಬೊಳಂತಿಮೊಗರು ಶಾಲೆಯ ವಿಠಲ ನಾಯಕ ಎಂದು ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸಂಘ, ಸಂಸ್ಕೃತ ಸಂಘ ಹಾಗೂ ಹಿಂದಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಗೀತ ವೈವಿಧ್ಯ ಅನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ಮಾನವೀಯ ಸಂಬಂಧಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಇಂದು ವಿದ್ಯಾರ್ಥಿಗಳು ಅತೀ ಚಿಕ್ಕ ವಯಸ್ಸಿನಲ್ಲೇ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬೇಸರ ಜೀವನದಲ್ಲಿ ಸಹಜ. ಆದರೆ ಅದನ್ನು ನಾವು ಹೇಗೆ ಕೊನೆಗೊಳಿಸುತ್ತೇವೆ ಎಂಬುದು ಮುಖ್ಯ. ಮನಸ್ಸನ್ನು ಖಿನ್ನತೆಯಿಂದ ದೂರವಿಡಲು ಒಳ್ಳೆಯ ಸಾಹಿತ್ಯ ಸಹಕರಿಸುತ್ತದೆ. ಸಹ್ಯವಾದ ಸಮಾಜದ ನಿರ್ಮಾಣಕ್ಕೆ ಉತ್ತಮ ಸಾಹಿತ್ಯದ ಅಗತ್ಯತೆಯಿದೆ ಎಂದು ನುಡಿದರು.
ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಹವ್ಯಾಸಗಳೂ ಬೇಕು. ಅದು ನಮ್ಮನ್ನು ಜೀವನದಲ್ಲಿ ಉತ್ತಮ ಸ್ಥಿತಿಗೆ ತರುವಂತಿರಬೇಕು. ಇಂದು ಹಾಡುಗಳಲ್ಲಿ ಮಧುರತೆ ಮಾಯವಾಗಿದೆ. ಕೆಲವೊಮ್ಮೆ ಹಾಡುಗಳಲ್ಲಿ ಮಧುರತೆಯಿದ್ದರೂ, ನೃತ್ಯಗಳಲ್ಲಿ ಆಭಾಸವಾಗುತ್ತದೆ. ಮನಸ್ಸನ್ನು ಕೆರಳಿಸುವಂತಹ ಹಾಡುಗಳೇ ಇಂದು ಹೆಚ್ಚಾಗಿದೆ ಎಂದರು.
ಯಾವುದೇ ಒಂದು ಭಾವನೆಯನ್ನು ಅನುಭವಿಸಿ ಹಾಡಿದಾಗ ಮಾತ್ರ ಅದು ಸುಮಧುರವಾಗಿರುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ಅರಳಿಸಿವಂತಹ ಸಾಹಿತ್ಯಕ್ಕೆ ಹೆಚ್ಚು ಆಸಕ್ತಿಯನ್ನು ತೋರಬೇಕು. ಸಾಹಿತ್ಯದಲ್ಲಿ ಅರ್ಥಮಾಡಿಕೊಳ್ಳಬೇಕಾದ ಹಲವಾರು ವಿಚಾರಗಳಿವೆ. ಉತ್ತಮ ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕು ಎಂದು ಅವರು ನುಡಿದರು.
ಕನ್ನಡ ಉಪನ್ಯಾಸಕಿ ಹಾಗೂ ಕನ್ನಡ ಸಂಘದ ಸಂಯೋಜಕಿ ಗೀತಾ ಕುಮಾರಿ .ಟಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ವಿಶ್ವನಾಥ.ಎನ್ ವಂದಿಸಿದರು.