ಸಮಾಜದ ಪ್ರತಿಯೊಬ್ಬನೂ ಪತ್ರಕರ್ತನಾಗಬಹುದು: ಗೋಪಾಲಕೃಷ್ಣ ಕುಂಟಿನಿ
ಪುತ್ತೂರು: ಇಂದಿನ ಪತ್ರಿಕೋದ್ಯಮ ಹಾಗೂ ಹಿಂದಿನ ಪತ್ರಿಕೋದ್ಯಮಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಈಗೀಗ ನಾಗರಿಕ ಪತ್ರಿಕೋದ್ಯಮವೆಂಬ ಕಲ್ಪನೆ ವಿಸ್ತೃತವಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕನೂ ಸಾಮಾಜಿಕ ತಾಣಗಳ ಮೂಲಕ ಹಾಗೂ ಪಾರಂಪರಿಕ ಮಾಧ್ಯಮಗಳ ಮೂಲಕ ಪತ್ರಕರ್ತನಾಗುವುದಕ್ಕೆ ಸಾಧ್ಯ ಎಂದು ವಿಜಯಕರ್ನಾಟಕ ದಿನಪತ್ರಿಕೆಯ ಪುತ್ತೂರಿನ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ತಿಳಿಸಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಗುರುವಾರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ’ಮಾಧ್ಯಮ ಮತ್ತು ಸಮಾಜ’ ಎಂಬ ವಿಷಯದ ಬಗೆಗೆ ಮಾತನಾಡಿದರು.
ಪ್ರಸ್ತುತ ಪತ್ರಿಕೋದ್ಯಮ ಜಾಗತೀಕರಣಕ್ಕೆ ಒಳಪಟ್ಟಿದೆ. ಇದರ ಪರಿಣಾಮವಾಗಿ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಅಂತೆಯೇ ತನ್ನ ಮೌಲ್ಯವನ್ನೂ ಕಳೆದುಕೊಳ್ಳುತ್ತಿದೆ. ಸ್ಪರ್ಧೆಯ ಪರಿಣಾಮವಾಗಿ ಪತ್ರಕರ್ತರು ಸತ್ಯಾಸತ್ಯತೆಯ ಪರಾಮರ್ಶೆಯನ್ನು ಮಾಡುತ್ತಿಲ್ಲ. ಮಾತ್ರವಲ್ಲದೆ ಇಂದಿನ ಸಾಮಾಜಿಕ ವ್ಯವಸ್ಥೆಯೂ ಜಡವಾಗಿದೆ. ಹಾಗಾಗಿ ಯಾವುದೇ ವಿಷಯದ ಬಗೆಗೆ ಯಾವುದೇ ವರದಿಯನ್ನು ಎಷ್ಟೇ ಅದ್ಭುತವಾಗಿ ಬರೆದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದರು.
ಇಂದು ಕೆಲವೊಂದು ಮಾಧ್ಯಮಗಳಲ್ಲಿ ತಪ್ಪು ಸುದ್ದಿಗಳು ಆಗಾಗ್ಗೆ ಪ್ರಕಟಗೊಳ್ಳುತ್ತಿರುತ್ತದೆ ಹಾಗೂ ಅದರ ಬಗೆಗೆ ಯಾರೂ ನಿಗಾವಹಿಸುವುದಿಲ್ಲ. ಸುದ್ದಿ ಒಂದು ಉತ್ಪನ್ನವಾಗಿಯೂ ಓದುಗ ಒಬ್ಬ ಗ್ರಾಹಕನಾಗಿಯೂ ಮಾರ್ಪಾಡಾಗಿದೆ. ಅಂತೆಯೇ ಪತ್ರಿಕೆಯಲ್ಲಿ ಎಲ್ಲಿ ಯಾವ ಸುದ್ದಿ ಪ್ರಕಟಿಸಿದರೆ ಎಷ್ಟು ಪತ್ರಿಕೆ ಮಾರಾಟವಾಗುತ್ತದೆ ಎಂದು ಯೋಚಿಸುವ ಮನಸ್ಥಿತಿ ಇಂದು ಜಾಗತೀಕರಣದಿಂದ ಬಂದಿದೆ ಎಂದು ಅಭಿಪ್ರಾಯ ಪಟ್ಟರು.
ಪತ್ರಕರ್ತನಾದವನು ಆದರ್ಶವನ್ನು ಇಟ್ಟುಕೊಂಡು ಪತ್ರಿಕಾರಂಗಕ್ಕೆ ಬರಬೇಕು. ಆಗ ಮಾತ್ರ ಬದಲಾವಣೆಗೆ ಯತ್ನಿಸಲು ಸಾಧ್ಯ. ಪತ್ರಿಕಾರಂಗದಲ್ಲಿ ಉತ್ತಮ ಬರಹಗಾರರಿಗೆ, ಚುರುಕಾದ ವ್ಯಕ್ತಿತ್ವದವರಿಗೆ ವಿಫುಲ ಅವಕಾಶಗಳಿವೆ. ಅಂತೆಯೇ ಆದರ್ಶದ ಬೆನ್ನು ಹತ್ತಿ ಹೊರಡುವ ಪತ್ರಕರ್ತ ಸಮಾಜದಲ್ಲಿ ಸವಾಲುಗಳನ್ನು ಎದುರಿಸಬೇಕಾದುದೂ ಅನಿವಾರ್ಯ ಎಂದರಲ್ಲದೆ ಪತ್ರಕರ್ತ ಬರೆದದ್ದು ವ್ಯಾಪಕವಾಗಿ ಓದಲ್ಪಡಬೇಕು, ಆಗಾಗ ಪತ್ರಕರ್ತನ ಬಗೆಗೆ ಸಮಾಜ ಕೇಳುವಂತಾಗಬೇಕು ಹಾಗೂ ಆತ ಅಪರೂಪಕ್ಕಷ್ಟೇ ಕಾಣಸಿಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್ ಮಾಧವ ಭಟ್ ಮಾತನಾಡಿ ವರದಿ ಮಾಡುವ ವರದಿಗಾರರು ಯಾವಾಗ ತಾವು ಮಾಡುವುದು ಸ್ಟೋರಿ ಅಥವ ಕಥೆ ಎಂದು ತಿಳಿದರೋ ಆವಾಗ ಹೊಸ ಆಯಾಮ ಹೊರಬಂತು. ಅದರೊಂದಿಗೆ ಪತ್ರಿಕಾರಂಗಕ್ಕೆ ಅಪಾಯವೂ ಬಂತು. ಇಂದು ಏನು ಘಟನೆ ನಡೆದಿದೆಯೋ ಹಾಗೆ ವರದಿಯನ್ನು ಬರೆಯದೆ ಅದಕ್ಕೆ ಬಣ್ಣಹಚ್ಚಿ ಬರೆಯುವ ಪರಿಪಾಠವೂ ಬೆಳೆದಿದೆ. ಪ್ರಾಮಾಣಿಕ ಪತ್ರಿಕೋದ್ಯಮದಿಂದ ಸಮಾಜಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್ ವಂದಿಸಿದರು. ವಿದ್ಯಾರ್ಥಿ ಓಂ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದು.