’ಸಂಶೋಧನೆಯಲ್ಲಿ ತೊಡಗಬೇಕಾದರೆ ಅನೇಕ ಪ್ರಕ್ರಿಯೆಗಳಿಗೆ ಒಳಪಡಬೇಕು’ – ವಿವೇಕಾನಂದದ ಸಂಶೋಧನಾ ಕಾರ್ಯಾಗಾರದ ಸಮಾರೋಪದಲ್ಲಿ ಡಾ.ರಾಧಾಕೃಷ್ಣ ಭಟ್
ಪುತ್ತೂರು: ಪ್ರಸ್ತುತ ಸಂದರ್ಭದಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು ಅತ್ಯಂತ ಸುಲಭವೇನಲ್ಲ. ಆರಂಭದಲ್ಲಿ ವಿಶ್ವವಿದ್ಯಾನಿಲಯವು ಅರ್ಜಿ ಆಹ್ವಾನಿಸಿದ ನಂತರ ಪಿ.ಎಚ್.ಡಿ ಅಧ್ಯಯನ ಕೊನೆಗೊಳ್ಳುವವರೆಗೂ ನಾನಾ ರೀತಿಯ ಪ್ರಕ್ರಿಯೆಗಳಿಗೆ ಅಭ್ಯರ್ಥಿಯು ಒಳಗೊಳ್ಳಬೇಕಿದೆ ಎಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಒಕ್ಕೂಟ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ ಒಂದು ದಿನದ ಸಂಶೋಧನಾ ಕಾರ್ಯಾಗಾರದಲ್ಲಿ ಸಮಾರೋಪ ಭಾಷಣ ಮಾಡಿದರು.
ಇಂದಿನ ದಿನಗಳಲ್ಲಿ ಯಾವುದೇ ಅಭ್ಯರ್ಥಿ ಸಂಶೋಧನೆಯಲ್ಲಿ ತೊಡಗಲು ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕು. ನಂತರ ಸಂದರ್ಶನ ನಡೆಯುತ್ತದೆ. ಈ ಸಂದರ್ಭದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮಾತ್ರ ಸಂಶೋಧನೆಗೆ ಇಳಿಯಲು ಸಾಧ್ಯ. ನಂತರ ಆರು ತಿಂಗಳ ಕೋರ್ಸ್ ವರ್ಕ್ ಅನ್ನು ಮಾಡುವುದು ಕಡ್ಡಾಯ. ಈ ನಡುವೆ ಆಂತರಿಕ ಪರೀಕ್ಷೆಗಳು, ಪ್ರಬಂಧ ಮಂಡನೆಯೇ ಮೊದಲಾದ ಸಂಗತಿಗಳಿವೆ. ಇವುಗಳನ್ನೆಲ್ಲಾ ಯಶಸ್ವಿಯಾಗಿ ಪೂರೈಸಿದ ನಂತರ ತಾನು ಆಯ್ದುಕೊಂಡ ವಿಷಯದಲ್ಲಿ ಸಂಶೋಧನೆಯನ್ನು ಆರಂಭಿಸಬಹುದು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮುಂಬಯಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ, ಸಂಶೋಧನಾ ಅಭ್ಯರ್ಥಿಯು ಶ್ರಮ ಸಂಸ್ಕೃತಿಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು. ಸಂಶೋಧನೆಯಲ್ಲಿ ಪದವಿ ಹೊಂದುವುದಕ್ಕಿಂತ ಸತ್ಯದ ಸಾಕ್ಷಾತ್ಕಾರ ಪ್ರಮುಖ ಆದ್ಯತೆಯಾಗಬೇಕು. ಪಿ.ಎಚ್.ಡಿ ಎನ್ನುವುದು ಸಂಶೋಧನೆಯ ಹಾದಿಯಲ್ಲಿ ಸಾಗುವುದಕ್ಕೆ ಸಿಗುವ ಅವಕಾಶವೇ ಹೊರತು ಅಹಂಕಾರದ ಸಂಕೇತವಲ್ಲ ಎಂದರಲ್ಲದೆ ಹತ್ತು ಕಡೆಯಿಂದ ಕದ್ದು ತಂದದ್ದೇ ಹನ್ನೊಂದನೆಯ ಪ್ರಬಂಧ ಆಗಬಾರದು. ಹೊಸ ಅನ್ವೇಷಣೆಗಳು ಸಂಶೋಧನೆಯ ಉದ್ದೇಶವಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ, ವಿವೇಕಾನಂದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ವಿ.ವಿ.ಭಟ್ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ಎನ್ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಡಾ.ಅರುಣ್ ಪ್ರಕಾಶ್ ಸ್ವಾಗತಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ವಂದಿಸಿದರು.