ವಿವೇಕಾನಂದದಲ್ಲಿ ಹಿರಿಯರಿಗೆ ಗೌರವ ಸಮರ್ಪಣೆ – ಬದಲಾವಣೆಗೆ ಹೊಂದಿಕೊಂಡು ಬದುಕಬೇಕು:ಡಾ.ಹೆಗ್ಗಡೆ
ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆಯ ನಾಲ್ಕನೆಯ ದಿನವಾದ ಶನಿವಾರ ಸಂಜೆ ಗೌರವ ಸಮರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಆಡಳಿತ ಮಂಡಳಿಯ ನಿವೃತ್ತ ಸದಸ್ಯರು, ವಿಶ್ರಾಂತ ಪ್ರಾಧ್ಯಾಪಕರು ಹಾಗೂ ನಿವೃತ್ತ ಶಿಕ್ಷಕೇತರ ಸಿಬ್ಬಂದಿಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ವಹಿಸಿದ್ದ ಡಾ.ಹೆಗ್ಗಡೆ ಮಾತನಾಡಿ ದೇಶದಲ್ಲಿ ಕಳೆದ ಕೆಲವು ದಶಕಗಳಲ್ಲಿ ಅಪಾರ ಬದಲಾವಣೆಗಳಾಗಿವೆ. ನಾವೂ ಕೂಡಾ ಇಂತಹ ಬದಲಾವಣೆಗೆ ಹೊಂದಿಕೊಂಡು, ಸವಾಲುಗಳನ್ನು ಎದುರಿಸಿ ಬದುಕಬೇಕಿದೆ. ಇಂದು ಪ್ರತಿಯೊಂದು ರಂಗದಲ್ಲೂ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗಾಗಿ ಅವುಗಳನ್ನು ಈಡೇರಿಸುವ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗಳು ಕಾರ್ಯತತ್ಪರವಾಗಬೇಕು. ರಾಷ್ಟ್ರಮಟ್ಟದ ಆಶಯಗಳನ್ನು ನಿಜ ಮಾಡಬೇಕಿದೆ ಎಂದರು.
ಸಾಮಾನ್ಯ ಶಿಕ್ಷಣದ ಜತೆಗೆ ಅಂತರಾಷ್ಟ್ರೀಯ ಮಟ್ಟದ ಸವಾಲುಗಳಿಗೆ ಎದೆಯೊಡ್ಡಬಲ್ಲ ಯುವ ಜನತೆಯನ್ನು ರೂಪಿಸುವ ಹೊಣೆಗಾರಿಕೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಇದೆ. ಕೇವಲ ತೇರ್ಗಡೆಯಾಗುವುದು ಮುಖ್ಯವಲ್ಲ ಬದಲಾಗಿ ಆಲಸ್ಯ ರಹಿತವಾದ ಜೀವನ ನಡೆಸುವುದರೊಂದಿಗೆ ಅತ್ಯುತ್ತಮ ಕ್ಷಮತೆ ತೋರುವಂತೆ ರೂಪುಗೊಳ್ಳಬೇಕಾದದ್ದು ಇಂದಿನ ತುರ್ತು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ದೃಢ ಸಂಕಲ್ಪ ಹೊಂದಿದ್ದರೆ ನಿರಂತರವಾಗಿ ಓದುವಂತೆ ಒತ್ತಡ ಹೇರಬೇಕಾದ ಅಗತ್ಯ ಬರುವುದಿಲ್ಲ. ಬದಲಾಗಿ ಬೇರೆ ಬೇರೆ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಸಾಕು. ವಿದ್ಯಾರ್ಜನೆಯನ್ನು ವಿದ್ಯಾರ್ಥಿಗಳು ಪ್ರೀತಿಸುವಂತಾಗಬೇಕು. ಆಗ ಮಾತ್ರ ನಿಜವಾದ ಶಿಕ್ಷಣದ ಸಾಕಾರ ಸಾಧ್ಯ ಎಂದರಲ್ಲದೆ ಹಿರಿಯರ ಸೇವೆಯನ್ನು ಗುರುತಿಸಿ ಗೌರವಿಸುವುದು ಅತ್ಯಂತ ಸ್ವಾಗತಾರ್ಹ ವಿಚಾರ ಎಂದು ನುಡಿದರು.
ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ರಾಮ ಭಟ್, ಪ್ರಧಾನ ಕಾರ್ಯದರ್ಶಿ ಪ್ರೊ.ಎ.ವಿ.ನಾರಾಯಣ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಕಾಲೇಜಿನ ಸಂಚಾಲಕ ಎಂ.ಟಿ.ಜಯರಾಮ ಭಟ್ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಪ್ರಸ್ತಾವನೆಗೈದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್ ವಂದಿಸಿದರು.