ಸಂಸ್ಕೃತ ಮತ್ತು ವಿಜ್ಞಾನಕ್ಕೆ ನಿಕಟ ಸಂಬಂಧವಿದೆ: ವಿ.ವಿ.ಭಟ್
ಪುತ್ತೂರು : ಭಾರತೀಯ ಪರಂಪರೆಯನ್ನು ಮೌಲಿಕವಾಗಿ ಅಧ್ಯಯನ ಮಾಡಬೇಕಾದರೆ ಸಂಸ್ಕೃತ ಭಾಷೆ ಉತ್ತಮ ಮಾಧ್ಯಮ. ಸಂಸ್ಕೃತ ಮತ್ತು ವಿಜ್ಞಾನದ ಸಂಬಂಧ ಮಹತ್ವವಾದದ್ದು. ವಿಜ್ಞಾನದ ಪ್ರಯೋಗದಲ್ಲಿ ಅಗಾಧವಾದ ವಿಚಾರ ಜ್ಞಾನವಿದೆ. ಮೌಖಿಕ ಜ್ಞಾನ ಸಂವಹನಕ್ಕೆ ಅಕ್ಷರ, ಭಾಷೆ, ಮದ್ರಣದ ಅವಶ್ಯಕತೆಯಿಲ್ಲದೆ ಜ್ಞಾನ ಸಂವಹನವಾಗಿ ಮುಂದುವರೆಯಿತು. ಕಂಪ್ಯೂಟರೀಕರಣದಿಂದಾಗಿ ಭಾಷೆಗಳ ಅರ್ಥ ವಿಭಿನ್ನವಾಗಿದೆ ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ವಿ.ವಿ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಿಕಾಸಂ ಸಂಸ್ಕೃತ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಂಸ್ಕೃತ ಮತ್ತು ವಿಜ್ಞಾನ ಎಂಬ ವಿಷಯದ ಕುರಿತು ಮಾತನಾಡಿದರು.
ಯಾವುದನ್ನು ನಾವು ಸಾಮಾನ್ಯ ಜ್ಞಾನ ಎಂದು ಪರಿಗಣಿಸಿದ್ದೇವೆಯೋ ಅದು ವೇದಗಳಿಂದ ಆರಂಭವಾಗಿದೆ. ನಮ್ಮ ಪೂರ್ವಾಗ್ರಹ ಪೀಡಿತವಾದ ಮನಸ್ಸಿನಿಂದ ಹೊರಬರಬೇಕಾದರೆ ಸಂಸ್ಕೃತದ ಅಧ್ಯಯನ ಬಹಳ ಮುಖ್ಯವಾದದ್ದು. ಸಂಸ್ಕೃತದಲ್ಲಿರುವ ಹಲವಾರು ವಿಷಯಗಳು ವೈಜ್ಞಾನಿಕವಾಗಿದೆ. ಇದರ ಮೂಲ ವಿಷಯಗಳನ್ನು ತಿಳಿಯಲು ಸಂವಹನ ಮತ್ತು ಸಲಹೆಗಾರರ ಕೊರತೆಯಿದೆ. ನಮ್ಮ ದೇಶದ ಜ್ಞಾನ ಸಂಪತ್ತನ್ನು ಅನ್ವೇಷಿಸಿದರೆ ಸಾಲದು, ಅದನ್ನು ನಮ್ಮ ದಿನಬಳಕೆಗೆ ಉಪಯೋಗಿಸುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿದ್ದರು. ವೇದಿಕೆಯಲ್ಲಿ ವಿಜ್ಞಾನ ಸಂಘದ ಅಧ್ಯಕ್ಷ ಗುರುಕೃಷ್ಣ ಹಾಗೂ ವಿಕಾಸಂ ಸಂಸ್ಕೃತ ಸಂಘದ ಅಧ್ಯಕ್ಷ ಈಶ್ವರ ಶರ್ಮ ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಕೆ.ಎಸ್ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಕುಮಾರ ಯಂ.ಕೆ ವಂದಿಸಿದರು. ವಿದ್ಯಾರ್ಥಿನಿ ಅಪರ್ಣಾ ಕಾರ್ಯಕ್ರಮ ನಿರ್ವಹಿಸಿದರು.