ಶಿಕ್ಷಣಕ್ಕೆ ಮಾದರಿ ಕೊಟ್ಟವರು ವೇದವ್ಯಾಸರು : ಉಮೇಶ್ ಹೆಗ್ಡೆ
ಪುತ್ತೂರು: ವೇದವ್ಯಾಸರು ಶಿಕ್ಷಣಕ್ಕೆ ಮಾದರಿಯನ್ನು ಕೊಟ್ಟವರು. ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ವ್ಯಾಸರ ಕೊಡುಗೆ ಅಪಾರವಾದುದು. ಆಚಾರ್ಯನಾದವನು ತಾನೂ ಬೆಳೆಯುತ್ತಾ ತನ್ನೊಂದಿಗೆ ಅನೇಕ ಜನರನ್ನು ಬೆಳೆಸುತ್ತಾನೆ ಎಂದು ಮೂರ್ಗಜೆ ಮೈತ್ರೇಯಿ ಗುರುಕುಲಂನ ಉನ್ನತ ಶಿಕ್ಷಣ ವಿಭಾಗದ ಪ್ರಾಚಾರ್ಯ ಉಮೇಶ್ ಹೆಗ್ಡೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ವಿಕಾಸಂ ಸಂಸ್ಕೃತ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವ್ಯಾಸ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ವ್ಯಾಸರೇ ಹೇಳುವಂತೆ ಮನುಷ್ಯ ಎಂದರೆ ಅನುಕಂಪವುಳ್ಳ ಜೀವಿ. ವ್ಯಕ್ತಿಗಳು ಸ್ವಾರ್ಥವನ್ನು ಬಿಟ್ಟು ಇತರರಿಗೂ ಜೀವನವನ್ನು ಕೊಟ್ಟಾಗ ಮಾನವರೆನಿಸಿಕೊಳ್ಳುತ್ತಾರೆ. ನಮ್ಮ ಸಮಯವನ್ನು ಇತರರಿಗೂ ಕೊಟ್ಟಾಗ ನಾವೂ ಬೆಳೆಯುತ್ತೇವೆ. ಬಾಹ್ಯ ಸೌಂದರ್ಯ ಮಾತ್ರ ಮುಖ್ಯವಾಗದೇ ಆಂತರಿಕ ಸೌಂದರ್ಯವನ್ನೂ ಕಾಪಾಡಿಕೊಳ್ಳಬೇಕು. ಮನುಷ್ಯ ಜೀವನಕ್ಕೆ ಜೀವಾತ್ಮ, ಪರಮಾತ್ಮ ಹಾಗೂ ಪ್ರಕೃತಿ ಮೂರೂ ಮುಖ್ಯ. ಜೀವಾತ್ಮವನ್ನು ಗುರುವಿನ ಮೂಲಕ ಪರಚಯಿಸಿಕೊಳ್ಳಬೇಕು ಹಾಗೆಯೇ ಪಕೃತಿ ಮಾತೆಯನ್ನು ಕೇವಲ ಬಳಸಿಕೊಳ್ಳದೆ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ತಂದೆ, ತಾಯಿಯ ನಂತರದ ಸ್ಥಾನವನ್ನು ನಾವು ಗುರುವಿಗೆ ನೀಡಬೇಕು. ಶಿಷ್ಯನಾದವನ ಭವಿಷ್ಯ ರೂಪಿಸುವ, ಜ್ಞಾನ ಸಂಪಾದನೆಯ ಹಾದಿ ತೋರಿಸುವ ದೊಡ್ಡ ಜವಾಬ್ದಾರಿ ಗುರುವಿನದ್ದು. ಗುರಿ ತಲುಪಲು ಗುರುವಿನ ಮಾರ್ಗದರ್ಶನ ಅತೀ ಅಗತ್ಯ. ವ್ಯಾಸ ಪೂರ್ಣಿಮೆ ಎಂಬುದು ಗುರು ಶಿಷ್ಯರ ಪರಂಪರೆಯನ್ನು ಗುರುತಿಸಿ ಗೌರವಿಸುವ ದಿನ ಮಾತ್ರವಲ್ಲದೆ ಆ ಪವಿತ್ರ ಸಂಬಂಧವನ್ನು ಮನನ ಮಾಡುವ ದಿನವೂ ಹೌದು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ, ವಿಕಾಸಂ ಸಂಯೋಜಕ ಡಾ. ಶ್ರೀಶ ಕುಮಾರ್ ಯಂ. ಕೆ., ಕಾರ್ಯದರ್ಶಿ ಮನೋಜ್ ಉಪಸ್ಥಿತರಿದ್ದರು. ವಿಕಾಸಂ ಅಧ್ಯಕ್ಷೆ ಸಾಯಿಶ್ರೀಪದ್ಮ ಸ್ವಾಗತಿಸಿ, ವಿದ್ಯಾರ್ಥಿನಿ ಪೂರ್ಣಿಮಾ ವಂದಿಸಿದರು. ವಿದ್ಯಾರ್ಥಿ ನಿಖೇತ್ ಕಾರ್ಯಕ್ರಮ ನಿರೂಪಿಸಿದರು.