ಆತ್ಮ ಪರಮಾತ್ಮನ ವಿವೇಚನೆಯೇ ದರ್ಶನ : ಪ್ರೊ.ಸುಬ್ರಾಯ ಭಟ್
ಪುತ್ತೂರು: ದರ್ಶನಗಳು ಮತ್ತು ಶಾಸ್ತ್ರಗಳು ಸಾಮಾನ್ಯವಾಗಿ ಒಂದೇ ಎಂಬ ಅಭಿಪ್ರಾಯ ಸಾಮಾನ್ಯ ಜನರಲ್ಲಿ ಇದೆ. ಆತ್ಮ, ಪರಮಾತ್ಮನ ವಿವೇಚನೆಯನ್ನು ದರ್ಶನ ಎನ್ನುತ್ತಾರೆ. ಯೋಗ, ಪೂರ್ವ ಮೀಮಾಂಸ, ಉತ್ತರ ಮೀಮಾಂಸ, ನ್ಯಾಯ, ವೈಶೇಷಿಕ ಎಂಬುದು ಷಡ್ದರ್ಶನಗಳು. ಇವುಗಳಲ್ಲಿ ಸಾಧನ ಮತ್ತು ಸಾಧ್ಯದ ಕುರಿತಾದ ವಿಮರ್ಶೆ ಇದೆ ಎಂದು ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಮೀಮಾಂಸಶಾಸ್ತ್ರ ವಿಭಾಗಾಧ್ಯಕ್ಷ ಪ್ರೊ. ಸುಬ್ರಾಯ ವಿ. ಭಟ್ಟ ಹೇಳಿದರು.
ಅವರು ಶನಿವಾರ ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಸಂಸ್ಕೃತ ಶಿಕ್ಷಕರ ಸಂಘದ ಆಶ್ರಯದಲ್ಲಿ ಷಡ್ದರ್ಶನ ಮತ್ತು ವಿಜ್ಞಾನ ಎಂಬ ವಿಷಯದ ಬಗೆಗಿನ ರಾಜ್ಯಮಟ್ಟದ ಒಂದು ದಿನದ ವಿದ್ವತ್ ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ದರ್ಶನಗಳು ವಿವೇಚಿಸುವುದು ಮಾರ್ಗವನ್ನು ಹುಡುಕುವುದಕ್ಕಾಗಿಯೇ ಹೊರತು ವಿಜ್ಞಾನವನ್ನು ವಿಮರ್ಶಿಸುವುದಕ್ಕಾಗಿ ಅಲ್ಲ. ಆದ್ದರಿಂದಲಾಗಿ ಆಸ್ತಿಕ ದರ್ಶನವು ಇವತ್ತಿನ ವಿಜ್ಞಾನವನ್ನು ಪ್ರತಿಪಾದಿಸಿಲ್ಲ. ಪ್ರತಿಯೊಂದು ಕಾರ್ಯಕ್ಕೂ ಕಾರಣವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಸ್ಟಡೀಸ್ನ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ ಅನೇಕ ವಿಚಾರಗಳನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟ ಹೆಮ್ಮೆ ಭಾರತದ ಪಾಲಿಗಿದೆ. ಪುರಾಣ ವಿಚಾರವನ್ನು ವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ಮಾಡುವ ಮೂಲಕ ಸಾಧನೆಯನ್ನು ಮಾಡಬೇಕು. ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸಬೇಕು. ಜಗಜ್ಜನನಿಯಾಗುವ ಪಥದಲ್ಲಿ ಮುನ್ನಡೆಯುತ್ತಿರುವ ಭಾರತಕ್ಕೆ ಪುರಾಣದ ವೈಚಾರಿಕ ಅಧ್ಯಯನವು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತ ಸರ್ಕಾರದ ನಿವೃತ್ತ ಎಡಿಷನಲ್ ಸೆಕ್ರೆಟರಿ ಸಿ.ಎ.ಗೋಪಿನಾಥ್ ನಿರ್ಮಿಸಿದ ತುಳು ಭಾಷೆಯ ಓಂ- ಬ್ರಹ್ಮಾಂಡೊದ ಸೃಷ್ಟಿ ಸ್ವರೊತ ಸಾಕ್ಷಾತ್ಕಾರ – ವೇದ, ಉಪನಿಷತ್ ಮತ್ತು ಪ್ರಾಚ್ಯ ಸಂಸ್ಕೃತಿಗಳ ಅರಿಕೆಯ ಒಂದು ದೃಷ್ಟಿಕೋನ ಎಂಬ ಧ್ವನಿ ಮುದ್ರಿಕೆಯ ಲೋಕಾರ್ಪಣ ಮಾಡಲಾಯಿತು.
ಸಾಹಿತ್ಯ ಕೇತ್ರದಲ್ಲಿ ಸಾಧನೆ ಮಾಡಿದ ಅಷ್ಟಾವಧಾನಿ ಡಾ. ಕಬ್ಬನಾಲೆ ವಸಂತ ಭಾರದ್ವಾಜ ಹಾಗೂ ಓಂಕಾರ ಧ್ವನಿ ತಟ್ಟೆಗೆ ಧ್ವನಿಗೂಡಿಸಿದ ಕುಸುಮ ಪ್ರಸಾದ್ ಮತ್ತು ಡಿ.ವಿ.ಡಿ.ಯ ಪ್ರಾಯೋಜಕತ್ವವನ್ನು ವಹಿಸಿದ ಪ್ರಕಾಶ್ ಶೆಟ್ಟಿ ಯವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಸಂಶೋಧನಾ ಕೇಂದ್ರದ ಗೌರವಾಧ್ಯಕ್ಷ ವಿ.ವಿ.ಭಟ್ ಪ್ರಸ್ತಾವನೆಗೈದರು. ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಎಂ.ಕೆ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಸಂಘದ ಅಧ್ಯಕ್ಷ ಮತ್ತು ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಟಿ.ಎಸ್ ವಂದಿಸಿದರು.