ಸಂಸ್ಕೃತ ಎಂಬುದು ಜ್ಷಾನದ ನಿಧಿ: ಶಿವ ಭಟ್
ಪುತ್ತೂರು: ಸಂಸ್ಕೃತಕ್ಕೆ ಅನಾದಿಕಾಲದಿಂದಲೂ ಮನ್ನಣೆ ಇತ್ತು. ನಮ್ಮ ರೀತಿ ನೀತಿಗಳು ಸರಿಯಾದ ದಾರಿಯಲ್ಲಿರ ಬೇಕಾದರೆ ಸಂಸ್ಕೃತದ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶಿವ ಭಟ್ ತಿಳಿಸಿದರು.
ಅವರು ವಿವೇಕಾನಂದ ಕಾಲೇಜಿನ ವಿಕಾಸಂ ಸಂಸ್ಕೃತ ಸಂಘದ ವತಿಯಿಂದ ನಡೆದ ಸಂಸ್ಕೃತೋತ್ಸವ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಳಷ್ಟು ಕಷ್ಟದಿಂದ ಮಾನವಜನ್ಮ ನಮ್ಮದಾಗಿದೆ. ಅದರಲ್ಲೂ ಕವಿತ್ವ ದೊರೆಯುವುದು ದುರ್ಲಭ. ನಮಗೆ ಕವಿತ್ವ ದೊರೆಯಬೇಕಾದರೆ ಅಪಾರ ಜ್ಞಾನದ ಅಗತ್ಯವಿದೆ. ಆ ಜ್ಞಾನ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಅದೊಂದು ಜ್ಞಾನದ ನಿಧಿ. ಅದನ್ನು ಪಡೆಯಬೇಕಾದರೆ ಕಠಿಣ ಪ್ರಯತ್ನ ಮಾಡಬೇಕು ಮತ್ತು ಕಲಿಕೆಯ ದಾಹ ಇರಬೇಕು. ಸಂಸ್ಕೃತ ಕಲಿಕೆಯೊಂದಿಗೆ ಅದರೊಂದಿಗಿನ ಸಂಸ್ಕೃತಿಯನ್ನು ಬೆಳೆಸಿ ಕೊಳ್ಳಬೇಕು. ವಿದ್ಯೆ ಅಥವಾ ಒಂದು ಬಾಷೆಯನ್ನು ಕಲಿಯಬೇಕಾದರೆ ಸತತ ಪ್ರಯತ್ನ ಮುಖ್ಯ. ವಿದ್ಯೆಯ ಬಗೆಗೆ ಅಗ್ನಿ ಪುರಾಣದಲ್ಲಿ ಉಲ್ಲೇಖವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎಚ್ ಮಾಧವ ಭಟ್ ಮಾತನಾಡಿ ಎಲ್ಲಾ ವಿಷಯಗಳನ್ನು ಉತ್ಸವ ರೂಪಿಯಾಗಿ ಮಾಡುವ ಸಮಾಜದಲ್ಲಿ ನಾವು ಸಂಸ್ಕೃತವನ್ನು ಉತ್ಸಾಹರೂಪಿಯಾಗಿ ಮಾಡಬೇಕು. ಪುರಾತನವಾದ ಸಂಸ್ಕೃತದಲ್ಲಿ ಅಮೂಲ್ಯವಾದ ವ್ಯಾಕರಣವಿದೆ. ಆದುದರಿಂದ ಸಂಸ್ಕೃತ ಎಂದುದು ಒಂದು ಅತ್ಯಂತ ಪರಿಶುದ್ಧವಾದ ಭಾಷೆ. ಯಾವ ಭಾಷೆಯನ್ನು ತೆಗೆದುಕೊಂಡರೂ ಜ್ಞಾನದ ವಿಷಯವಾಗಿ ಸಂಸ್ಕೃತಕ್ಕೆ ಉತ್ತಮ ಸ್ಥಾನವಿದೆ. ಸಂಸ್ಕೃತ ಒಂದು ಸುಂದರ ಕೃತಿಯನ್ನು ಮತ್ತಷ್ಟು ಸುಂದರವನ್ನಾಗಿ ಮಾಡುತ್ತದೆ ಎಂದರು.
ಸಂಸ್ಕೃತ ವಿಷಯದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಮಾನಸ ಆರ್, ಶ್ವೇತ ಕೆ ಎಸ್, ಸ್ವಾತಿ ಪಿ ಎಸ್, ಸ್ವಾತಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸುಕನ್ಯ ಮತ್ತು ಬಳಗದವರು ಸಂಸ್ಕೃತ ಗೀತಗಾಯನ ಮಾಡಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥೆ ಎಂ ಉಮಾದೇವಿ ಹಾಗೂ ಸಂಸ್ಕೃತ ಸಂಘದ ಕಾರ್ಯದರ್ಶಿ ಸ್ಮಿತಾ ಪಾರ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಕೃತ ಸಂಘದ ಅಧ್ಯಕ್ಷ ನಟರಾಜ ಜೋಯಿಸ ಸ್ವಾಗತಿಸಿದರು. ವಿದ್ಯಾರ್ಥಿನಿ ಶುಭ ಗೌರಿ ವಂದಿಸಿದರು. ವಿದ್ಯಾರ್ಥಿ ಈಶ್ವರ ಶರ್ಮ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅಪರ್ಣ ಎಸ್ ಕಾರ್ಯಕ್ರಮ ನಿರೂಪಿಸಿದರು.