ಸಂತ್ರಸ್ತರೇ ಅನ್ಯಾಯವಾಗಿಲ್ಲ ಎಂದರೆ ನಾವೇನು ಮಾಡಬೇಕು: ನ್ಯಾಯಮೂರ್ತಿ ಎನ್ ಕುಮಾರ್
ಪುತ್ತೂರು: ’ಅತ್ಯಾಚಾರ ಎಸಗಿದ ಮಂದಿಗೆ ಶಿಕ್ಷೆಯಾಗುತ್ತಿಲ್ಲ ಎನ್ನುತ್ತೀರಲ್ಲಾ, ಆದರೆ ಸ್ವತಃ ಅತ್ಯಾಚಾರಕ್ಕೊಳಗಾದವರೇ ನ್ಯಾಯಾಲಯದಲ್ಲಿ ಹೇಳಿಕೆ ಕೊಡುವಾಗ ತನ್ನ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದರೆ ನಾವೇನು ಮಾಡಬೇಕು?’
ಜನ ತಮ್ಮ ಕಣ್ಣ ಮುಂದೆಯೇ ನಡೆದ ಪರಾಧ ಕೃತ್ಯಗಳ ಬಗೆಗೆ ಸಾಕ್ಷಿ ಹೇಳಲು ಭಯಪಟ್ಟರೆ ನಾವು ಹೇಗೆ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆ ಸಾಧ್ಯ?
ನ್ಯಾಯಾಲಯಗಳಲ್ಲಿ ನ್ಯಾಯತೀರ್ಮಾನ ತಡವಾಗುತ್ತದೆ ಎಂದು ಆರೋಪಿಸುತ್ತೀರಿ. ಆದರೆ ಕೇಸು ದಾಖಲಾದ ಒಂದೇ ಗಂಟೆಯಲ್ಲಿ ತೀರ್ಪು ನೀಡಿದ ಉದಾಹರಣೆಗಳಿವೆ. ಇದು ಎಷ್ಟು ಮಂದಿಗೆ ಗೊತ್ತಿದೆ? ನ್ಯಾಯ ತೀರ್ಮಾನ ತಡವಾಗುವುದರ ಹಿಂದೆ ಸಾಕ್ಷಿದಾರರು, ಅರ್ಜಿದಾರರೇ ಮೊದಲಾದವರೆಲ್ಲಾ ಸರಿಯಾದ ದಿನದಂದು ನ್ಯಾಯಾಲಯಕ್ಕೆ ಹಾಜರಾಗದಿರುವುದೂ ಕಾರಣ. ಇವುಗಳನ್ನೆಲ್ಲಾ ಯಾರು ಅರ್ಥೈಸಿಕೊಳ್ಳುತ್ತಾರೆ?
ಹೀಗಂತ ಹೇಳಿದ್ದು ಕಾರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಜಸ್ಟಿಸ್ ಎನ್. ಕುಮಾರ್. ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಪಾತ್ರ ಎನ್ನುವ ವಿಚಾರವಾಗಿ ಉಪನ್ಯಾಸ ನೀಡಿದ್ದಲ್ಲದೆ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ನಾವು ನೆಮ್ಮದಿಯಿಂದ ಬದುಕು ಬದುಕುತ್ತಿದ್ದರೆ ಅದಕ್ಕೆ ಕಾರಣ ನ್ಯಾಯಾಂಗ ವ್ಯವಸ್ಥೆ. ನಾವು ನ್ಯಾಯಾಂಗದ ಬಗೆಗೆ ಇರುವ ಸುಳ್ಳು ಟೀಕೆಗಳಿಗೆ ಗಮನಕೊಡದೆ ಸತ್ಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಮಾಡಬೇಕು. ಅಂತೆಯೇ ನ್ಯಾಯಾಂಗದ ಬಗೆಗೆ ಅರಿವು ಮೂಡಿಸುವ ಕರ್ತವ್ಯ ಪ್ರತಿಯೊಬ್ಬ ನಾಗರಿಕರದ್ದು. ನ್ಯಾಯಾಂಗದ ಪಾತ್ರ ತಿಳಿಬೇಕಾದರೆ ಸಂವಿಧಾನವನ್ನು ಸರಿಯಾಗಿ ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನ್ಯಾಯಾಂಗದ ಅಧಿಕಾರದ ಬಗ್ಗೆ ಮಾಹಿತಿ ನೀಡುತ್ತಾ, ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಇರುವಷ್ಟು ಅಧಿಕಾರ ವಿಶ್ವದ ಬೇರಾವ ನ್ಯಾಯಾಲಯಗಳಿಗೂ ಇಲ್ಲ. ಆದರೆ ನಾವು ಕಾನೂನನ್ನು ಸರಿಯಾಗಿ ಹಿಂಬಾಲಿಸುತ್ತಿಲ್ಲ. ನ್ಯಾಯಾಲಯದಲ್ಲಿ ಸತ್ಯವನ್ನು ಹೇಳುತ್ತೇನೆಂದು ಪ್ರಮಾಣ ಮಾಡಿ ಸುಳ್ಳನ್ನು ಹೇಳುವವರೇ ಹೆಚ್ಚು. ಸಾಕ್ಷಿ ಹೇಳುವವರು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ. ಇದರಿಂದ ನ್ಯಾಯ ತೀರ್ಮಾನ ನಿಧಾನವಾಗುತ್ತದೆ ಮತ್ತು ಹಾದಿತಪ್ಪುತ್ತದೆ ಎಂದರು.
ಪತ್ರಿಕೋದ್ಯಮದ ಬಗೆಗೆ ಮಾತನಾಡುತ್ತಾ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಬವಾಗಿದೆ. ಆ ಸ್ಥಂಬ ಇನ್ನೂ ಬಲಯುತವಾಗಬೇಕು. ಅದು ಹಣವಂತರ ಕಪಿಮುಷ್ಟಿಯಿಂದ ಹೊರಬರಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಸ್ವತಂತ್ರ ಮಾಧ್ಯಮವನ್ನು ಉಳಿಸಿಕೊಳ್ಳಬೇಕು ಎಂದು ಆಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಮಾತನಾಡಿ ಮನುಷ್ಯನಿಗೆ ಶೌರ್ಯ ಹಾಗೂ ವಿವೇಚನೆ ಅತಿ ಮುಖ್ಯ. ಧೈರ್ಯವಿಲ್ಲದವರು ಸತ್ಯವನ್ನು ಹೇಳಲು ಸಾಧ್ಯವಿಲ್ಲ. ಇಂದು ದೇಶದಲ್ಲಿ ಮಹಿಳೆಯರ ಸ್ಥಾನ ಉನ್ನತ ಸ್ಥಾನಕ್ಕೆ ಏರಿದೆ. ಮಹಿಳೆಯರು ತಮ್ಮ ಕಾಲಮೇಲೆ ತಾವು ನಿಂತುಕೊಳ್ಳುವಂತಾಗಿದೆ. ಮಹಿಳೆಯರ ಸ್ಥಿತಿಗತಿ ಹಾಗೂ ಶಿಕ್ಷಣದ ಪರಿಸ್ಥಿತಿ ಚೆನ್ನಾಗಿಲ್ಲದ ಹೊರತು ಅಭಿವೃದ್ಧಿ ಸಾಧ್ಯವಿಲಎಂದರು.
ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಕೆ.ಎಂ.ನಟರಾಜ್ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹೇಶ್ ಕಜೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಿತಾ ಕುಮಾರಿ ಎಂ. ಎನ್ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.