ವಿವೇಕಾನಂದದಲ್ಲಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆ ಉದ್ಘಾಟನೆ
ಪುತ್ತೂರು: ಸಾಧನೆಯೆಡೆಗೆ ಹೆಜ್ಜೆ ಇಡುವವನಿಗೆ ಸವಾಲುಗಳು ಸಹಜ. ಆದರೆ ಅವುಗಳನ್ನು ಎದುರಿಸಿ ಮುನ್ನೆಡೆದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಸವಾಲುಗಳಿಗೆ ಬೆನ್ನು ಹಾಕುವವನು ಏನನ್ನೂ ಸಾಕಾರಗೊಳಿಸಲಾರ. ಸೋಲೇ ಗೆಲುವಿನ ಸೋಪಾನ ಅನ್ನುವ ಬೀಜಮಂತ್ರ. ನಮ್ಮನ್ನು ಮತ್ತೆ ಮತ್ತೆ ಪ್ರೇರೇಪಿಸಬಲ್ಲುದು ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಅಭ್ಯರ್ಥಿ ಶ್ರೀಶ ಭಟ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ವಿಜ್ಞಾನ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಲಾದ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕನಸುಗಳನ್ನು ಹೆಣೆಯಬೇಕು. ಆ ಕನಸುಗಳು ಸಾಕ್ಷಾತ್ಕಾರಗೊಳ್ಳುವುದಕ್ಕೆ ಅವಿರತ ಪ್ರಯತ್ನ ಸಾಗುತ್ತಲೇ ಇರಬೇಕು. ಯಶಸ್ಸಿಗೆ ಅಡ್ಡಹಾದಿ ಇಲ್ಲ ಎಂಬುದು ಸರ್ವವಿಧಿತ. ಕೇವಲ ಅಂಕ ಗಳಿಕೆಯೊಂದೇ ಜೀವನದ ಪರಮ ಉದ್ದೇಶವಾಗಬಾರದು. ಶೈಕ್ಷಣಿಕವಾಗಿ ರ್ಯಾಂಕ್ ಹೊಂದಿದವರೂ ಜೀವನದಲ್ಲಿ ಸೋತ ಉದಾಹರಣೆಗಳು ಬೇಕಾದಷ್ಟಿವೆ. ಹಾಗಾಗಿ ನಮ್ಮ ಶೈಕ್ಷಣಿಕ ಸಾಧನೆಗೂ, ಜೀವನದ ಯಶಸ್ಸಿಗೂ ಅನೇಕ ಸಂದರ್ಭಗಳಲ್ಲಿ ಸಂಬಂಧವೇ ಇರಲಾರದು ಎಂದು ನುಡಿದರು.
ಕಾಲೇಜಿ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಅನೇಕರು ಸಮಯವಿಲ್ಲ ಎಂದು ಹಲುಬುತ್ತಾರೆ. ಆದರೆ ಪ್ರತಿಯೊಬ್ಬನಿಗೂ ೨೪ ಗಂಟೆ ಮಾತ್ರವೇ ಇರುವುದು ಹಾಗೂ ಈ ಪ್ರಪಂಚದ ಸಾಧಕರೆಲ್ಲರೂ ಆ ನಿಗದಿತ ಸಮಯವನ್ನೇ ಹೊಂದಿಸಿ ಅಮೋಘವಾದದ್ದನ್ನು ಸೃಷ್ಟಿಸಿದ್ದಾರೆ ಎಂಬುದು ಮನನಾರ್ಹ. ವಿಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗುವ, ಗ್ರಾಮೀಣ ಮಕ್ಕಳಿಗೆ ಉಪಕಾರಿಯೆನಿಸುವ ಮಾದರಿಗಳ ತಯಾರಿಯಲ್ಲಿ ತೊಡಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಅನೇಕಾನೇಕ ವಿದ್ಯಾರ್ಥಿ ವೇತನಗಳು ಲಭ್ಯವಿದೆ. ಅವುಗಳನ್ನು ಅರಿತು ಆ ಪ್ರಯೋಜನವನ್ನು ಪಡೆದುಕೊಳ್ಳಬೇಕು. ವಿಜ್ಞಾನದ ಕಲಿಕೆ ದೇಶದ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು. ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು.
ವಿದ್ಯಾಥಿನಿ ಸುನಾದ ಹಾಗೂ ತಂಡ ಪ್ರಾಥಿಸಿದರು. ವಿಜ್ಞಾನ ಸಂಘದ ಸಂಯೋಜಕ, ಪ್ರಾಧ್ಯಾಪಕ ಪ್ರೊ.ಶಿವಪ್ರಸಾದ್ ಕೆ. ಎಸ್ ಪ್ರಸ್ತಾವನೆಗೈದರು. ವಿಜ್ಞಾನ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಗತಿಸಿದರು. ಕಾರ್ಯದಶಿ ಸುಕನ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ರಂಜಿತಾ ಹಾಗೂ ತುಷಾರ ಕಾರ್ಯಕ್ರಮ ನಿರ್ವಹಿಸಿದರು.