ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ: ಪ್ರೊ.ರೊನಾಲ್ಡ್ ಪಿಂಟೋ
ಪುತ್ತೂರು: ಜೀವನದಲ್ಲಿ ಏನನ್ನಾದರೂ ಸಾಧಿಸಲು ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು. ಕಟ್ಟಿಕೊಂಡ ಕನಸನ್ನು ಸಾಕಾರಗೊಳಿಸಲು ಆಸಕ್ತಿ ಮತ್ತು ಪರಿಶ್ರಮ ಎರಡೂ ಅಗತ್ಯ. ಸತತ ಪ್ರಯತ್ನ ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ ಎಂದು ಮಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಇಂಡಿವಿಜುವಲ್ ಡೆವಲಪ್‌ಮೆಂಟ್‌ನ ನಿರ್ದೇಶಕ ಪ್ರೊ.ರೊನಾಲ್ಡ್ ಪಿಂಟೋ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಿಜ್ಞಾನ ಸಂಘ ಮತ್ತು ತರಬೇತಿ ಹಾಗೂ ಉದ್ಯೋಗ ಘಟಕಗಳ ಸಹಯೋಗದಲ್ಲಿ ಆಯೋಜಿಸಲಾದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾಹಿತಿ ನೀಡಿದರು.
ಆಸಕ್ತಿ ಇರುವ ಕ್ಷೇತ್ರದಲ್ಲೇ ಉದ್ಯೋಗವನ್ನು ಅರಸುವುದು ಅಗತ್ಯ. ವೇತನದ ಕಾರಣಕ್ಕಾಗಿ ಆಸಕ್ತಿಯಿಲ್ಲದ ಕ್ಷೇತ್ರಕ್ಕೆ ಅಡಿಯಿಟ್ಟರೆ ಆತ್ಮಸಂತೃಪ್ತಿ ಇರಲಾರದು. ಪ್ರತಿಯೊಬ್ಬ ಉದ್ಯೋಗಿಗೂ ತನ್ನ ಉದ್ಯೋಗದಲ್ಲಿ ತೃಪ್ತಿ, ಸಂತೋಷ ಇರಬೇಕು. ಹಣ ಸಂತಸಕ್ಕಿಂತ ಮಿಗಿಲಾದುದಲ್ಲ ಎಂದರಲ್ಲದೆ ಸಂದರ್ಶನ ಎದುರಿಸುವ ಬಗೆ, ಗುಂಪು ಚರ್ಚೆಗಳಲ್ಲಿ ಭಾಗವಹಿಸುವ ಕ್ರಮ ಮೊದಲಾದ ವೃತ್ತಿಸಂಬಂಧಿ ವಿಚಾರಗಳ ಬಗೆಗೆ ವಿವರಣೆ ನಿಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಪ್ರತಿಯೊಬ್ಬನಲ್ಲೂ ಕನಸುಗಳಿವೆ. ಅಂತಹ ಕನಸುಗಳನ್ನು ನನಸು ಮಾಡುವಲ್ಲಿ ವಿವಿಧ ತರಬೇತಿ, ಮಾರ್ಗದರ್ಶನ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಎತ್ತರಕ್ಕೇರಲು ಏಣಿ ಇರುವಂತೆ ಉನ್ನತ ಉದ್ಯೋಗ ಪಡೆಯುವ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಬೇಕಾಗುತ್ತವೆ ಎಂದರು.
ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಜೀವಿತಾ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಸ್ವಾಗತಿಸಿದರು. ವಿಜ್ಞಾನ ಸಂಘದ ಅಧ್ಯಕ್ಷ ಅನ್ವಿತ್ ವಂದಿಸಿದರು. ಸಂಘದ ಕಾರ್ಯದರ್ಶಿ ಮಾನಸ ಮತ್ತು ವಿದ್ಯಾರ್ಥಿನಿ ರಶ್ಮಿತ ಕಾರ್ಯಕ್ರಮ ನಿರ್ವಹಿಸಿದರು.