ಸ್ಪರ್ಧಾತ್ಮಕ ಭಾವನೆ ಪ್ರಗತಿಗೆ ಸಂಕೇತ : ಪ್ರೊ.ಹರೀಶ್ ಭಟ್
ಪುತ್ತೂರು: ಪ್ರತಿಯೊಂದು ವಿಚಾರದಲ್ಲಿಯೂ ಸ್ಪರ್ಧೆ ಇದ್ದರೆ ಮಾತ್ರ ಬೆಳವಣಿಗೆ ಸಾಧ್ಯ. ಸ್ಪರ್ಧೆ ಪ್ರಗತಿಯನ್ನು ತೋರುವ ಸಂಕೇತವಾಗಿದೆ. ವಿಜ್ಞಾನವು ಸಮಾಜದ ಉತ್ತಮ ಬೆಳವಣಿಗೆಗೆ ಕಾರಣವಾಗಬೇಕೇ ವಿನಃ ಸಮಾಜವನ್ನು ದಾರಿ ತಪ್ಪಿಸುವಂತಿರಬಾರದು ಎಂದು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ವಿಜ್ಞಾನ ವಿಭಾಗ ಮುಖ್ಯಸ್ಥ ಹರೀಶ್ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಿಜ್ಞಾನ ಸಂಘ ಆಯೋಜಿಸಿದ ಸೈನ್ಸ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಕೇವಲ ಅಂಕಗಳಿಸಿದರೆ ಔದ್ಯೋಗಿಕ ರಂಗವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಕೌಶಲ್ಯವೂ ಅಗತ್ಯ. ಅಂಕ ಗಳಿಸದೆಯೇ ಪ್ರಖ್ಯಾತ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಉದಾಹರಣೆಗಳು ಸಾಕಷ್ಟಿವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲದೇ ನಮ್ಮ ಸಂಸ್ಕಾರಕ್ಕೆ ಇರುವ ಬೆಲೆಯು ಪಠ್ಯದ ಅಂಕಗಳಿಗಿಂತ ಹೆಚ್ಚಿನ ತೂಕವನ್ನು ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಎಲ್ಲಾ ಸ್ಪರ್ಧೆಯ ಹಿಂದೆಯೂ ಕಲಿಯುವಿಕೆಯ ವಲಯವನ್ನು ವಿಸ್ತರಿಸುವ ಆಶಯವಿದೆ. ಬರೀ ಸಾಧನೆ ಇದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಅದರೊಂದಿಗೆ ಪೂರಕ ಕಲೆಗಳನ್ನು ಕರಗತಗೊಳಿಸಿಕೊಂಡಿರಬೇಕು ಎಂದು ನುಡಿದರು.
ವಿಶ್ವ ವಿಜ್ಞಾನ ದಿನಾಚರಣೆಯ ಬೆನ್ನಲ್ಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅರ್ಥಪೂರ್ಣವಾದದ್ದು. ಸಾಧಕನಾಗಬೇಕೆಂಬ ಹಂಬಲವಿರುವವರು ತನ್ನ ಸಾಧನೆಗೆ ಅಗತ್ಯವಿಲ್ಲದೇ ಇರುವ ಹವ್ಯಾಸಗಳಿಂದ ದೂರ ಸರಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸುಗಮವಾಗಿ ಪಯಣಿಸಲು ಸಾಧ್ಯ. ದುಷ್ಚಟಗಳನ್ನು ಇಟ್ಟುಕೊಂಡು ಸಾದಿಸ ಹೊರಟರೆ ಗುರಿ ತಲುಪುವುದು ಕಷ್ಟಕರವಾಗುವುದು ಎಂದು ಕಿವಿಮಾತು ನುಡಿದರು.
ವೇದಿಕೆಯಲ್ಲಿ ವಿಜ್ಞಾನ ಸಂಘದ ಜೊತೆ ಕಾರ್ಯದರ್ಶಿ ನಿಶಾ ಉಪಸ್ಥಿತರಿದ್ದರು. ಅಧ್ಯಕ್ಷ ಗುರು ಕೃಷ್ಣ ಸ್ವಾಗತಿಸಿ, ಕಾರ್ಯದರ್ಶಿ ಶೌರಿ ವಂದಿಸಿದರು. ಕಾರ್ಯಕ್ರಮದ ಸಂಯೋಜಕ ಪ್ರೊ.ಶಿವಪ್ರಸಾದ್ ಪ್ರಸ್ತಾವನೆಗೈದರು.