VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ಹಾಲು ಉತ್ಪಾದನೆಯ ಬಗೆಗಿನ ರಾಜ್ಯಮಟ್ಟದ ವಿಚಾರಗೋಷ್ಠಿ – ಹೈನುಗಾರಿಕೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗಿದೆ : ರವಿರಾಜ ಹೆಗ್ಡೆ

ಪುತ್ತೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ೧೯೮೦ರ ದಶಕದಲ್ಲಿ ನಾಲ್ಕು ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದರೆ ಈಗ ಮೂರು ಲಕ್ಷದಎಪ್ಪತ್ತು ಸಾವಿರ ಲೀಟರ್‌ನಷ್ಟು ದೊರೆಯುತ್ತಿದೆ ಅಲ್ಲದೆ ಸುಮಾರು ಅರವತ್ತು ಸಾವಿರ ಮಂದಿ ಹಾಲನ್ನು ದಿನಂಪ್ರತಿ ಮಾರಾಟ ಮಾಡುತ್ತಿದ್ದಾರೆ. ಇದು ಹಾಲು ಉತ್ಪಾದನೆಯ ಕ್ಷೇತ್ರದಲ್ಲಾದ ಕ್ರಾಂತಿಕಾರಕ ಬೆಳವಣಿಗೆಯನ್ನು ಎತ್ತಿತೋರಿಸುತ್ತಿದೆ. ಹೈನುಗಾರಿಕೆ ಎನ್ನುವುದು ಇಂದು ಹಳ್ಳಿ ಹಳ್ಳಿಗಳಲ್ಲಿ ಸದೃಢ ಆದಾಯದ ಮೂಲವನ್ನು ಸೃಷ್ಟಿಸಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ದ.ಕ.ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ’ಹಾಲು ಉತ್ಪಾದನೆ- ವಿಚಾರ ಮತ್ತು ಅವಕಾಶಗಳು’ ಎಂಬ ವಿಷಯದ ಬಗೆಗೆ ನಡೆದ ಒಂದು ದಿನದ ರಾಜ್ಯಮಟ್ಟದ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

News Photo - Economics Seminar 13.04.16

ತೆಂಗಿನಕಾಯಿ, ರಬ್ಬರ್‌ನಂತಹ ಕೃಷಿ ಉತ್ಪನ್ನಗಳ ಧಾರಣೆಯಲ್ಲಿ ಆಗಿಂದಾಗ್ಗೆ ಏರಿಳಿಕೆಯಾಗಿ ರೈತರು ಆತಂಕಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹೈನುಗಾರಿಕೆಯನ್ನು ಗಮನಿಸಿದರೆ ನೆಮ್ಮದಿಯೆನಿಸುತ್ತದೆ. ಯಾಕೆಂದರೆ ಸರಿಯಾದ ದರ ರೈತರಿಗೆ ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ದೊರಕುತ್ತಿದೆ. ಹಾಗಾಗಿ ಮುಂದಿನ ಪೀಳಿಗೆಯೂ ಈ ಕ್ಷೇತ್ರದಲ್ಲಿ ಭರವಸೆ ತಾಳಬಹುದಾಗಿದೆ. ಕೇವಲ ಹಾಲು ಮಾತ್ರವಲ್ಲದೆ ಗೊಬ್ಬರದಿಂದಲೂ, ಉಪ ಉತ್ಪನ್ನದಿಂದಲೂ ಸಾಕಷ್ಟು ಆದಾಯ ದೊರಕುತ್ತಿದೆ. ಆದುದರಿಂದ ಹಸು ಸಾಕಣೆ ಅನ್ನುವುದು ಅನೇಕ ವಿಧದಿಂದ ಲಾಭ ಆಗುವುದಕ್ಕೆ ಸಾಧ್ಯ ಅದರಲ್ಲೂ ಅತ್ಯಂತ ವೈಜ್ಞಾನಿಕವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದಲ್ಲಿ ಅತ್ಯುತ್ತಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯ ಎಂದು ನುಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ, ಪದವಿ ನಂತರ ವಿದ್ಯಾರ್ಥಿಗಳು ಮುಂದೇನು ಅನ್ನುವ ಪ್ರಶ್ನೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಹೈನುಗಾರಿಕೆಯೂ ಅತ್ಯುತ್ತಮ ಬದುಕನ್ನು ಒದಗಿಸಿಕೊಡಬಲ್ಲುದು ಎಂಬ ದೃಷ್ಟಿಕೋನವನ್ನು ನೀಡುವುದು ಅಗತ್ಯ. ಹಳ್ಳಿಯಲ್ಲಿದ್ದೇ ಹಸನಾದ ಬದುಕನ್ನು ಸಾಗಿಸುವುದಕ್ಕೆ ಹೈನುಗಾರಿಕೆ ಅವಕಾಶ ನೀಡುತ್ತದೆ ಎಂಬ ಕಲ್ಪನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಇದರಿಂದ ಸ್ವಾವಲಂಬಿ ಬದುಕು ನಮ್ಮದಾಗುತ್ತದೆ. ಆದ್ದರಿಂದ ಹೈನುಗಾರಿಕೆಯೂ ನಮ್ಮ ಮುಂದಿರುವ ಅನೇಕ ಅವಕಾಶಗಳಲ್ಲಿ ಪ್ರಮುಖವಾದದ್ದು ಎಂದು ತಿಳಿಯಬೇಕು  ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪ್ರತಿಯೊಬ್ಬರೂ ಇಂದು ಪಟ್ಟಣ ಕೇಂದ್ರಿತ ಉದ್ಯೋಗದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹಳ್ಳಿಗಳಲ್ಲೇ ಉಳಿದು, ನಮ್ಮತನವನ್ನು ಉಳಿಸಿಕೊಂಡು ಬಾಳುವ ಬಗೆಗೆ ತಿಳಿದುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲೂ ಉದ್ಯೋಗ ಸೃಷ್ಟಿಸುವುದರಲ್ಲಿ ಹೈನುಗಾರಿಕೆಯ ಕೊಡುಗೆ ಅಪಾರ ಎಂದರು.