ವಿವೇಕಾನಂದ ಕಾಲೇಜಿನಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ -ಕರ್ನಾಟಕದಲ್ಲಿ ಹಸ್ತಪ್ರತಿ ಅಧ್ಯಯನ ಕ್ಷೇತ್ರ ಬಡವಾಗಿದೆ : ಪ್ರೊ.ಎಸ್.ಡಿ.ಶೆಟ್ಟಿ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಬುದ್ಧಿವಂತರು ಹೌದಾದರೂ ಹಸ್ತಪ್ರತಿ ಕ್ಷೇತ್ರದಲ್ಲಿ ಈ ಜಿಲ್ಲೆಯ ಮಂದಿ ಸಾಕಷ್ಟು ಹಿಂದಿರುವುದು ವಿಷಾದನೀಯ. ಕಸ್ತಪ್ರತಿಗಳ ಮಹತ್ವ, ಅವುಗಳಿಂದ ದೊರಕಬಹುದಾದ ಜ್ಞಾನ ಸಾಗರವನ್ನು ಗುರುತಿಸುವಲ್ಲಿ ಈ ಭಾಗದ ಮಂದಿ ವಿಫಲರಾಗಿರುವುದು ಖೇದಕರ. ಹಸ್ತಪ್ರತಿಗಳ ನಿಜವಾದ ಅಧ್ಯಯನ ಶುರುವಾದರೆ ಅದ್ಭುತವೆನಿಸುವ ಮಾಹಿತಿಗಳು ಹೊರಜಗತ್ತಿಗೆ ಕಾಣಿಸಿಕೊಳ್ಳಲಿವೆ ಮತ್ತು ಭಾರತದ ಶ್ರೇಷ್ಟತೆ ವಿಜೃಂಭಿಸಲಿದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಎಸ್.ಡಿ.ಶೆಟ್ಟಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಕಾಲೇಜಿನ ಕನ್ನಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ ಈ ಬಾರಿಯ ಸಿದ್ದಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ ಐವತ್ತು ಸಾವಿರ ಹಸ್ತಪ್ರತಿಗಳಿವೆ. ಇನ್ನೂ ಐವತ್ತು ಸಾವಿರದಷ್ಟು ಇರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿನ ಅಧ್ಯಯನಕ್ಕೆ ತೊಡಗಿದಾಗ ಕೌತುಕದ ವಿಚಾರವೊಂದು ತಿಳಿದು ಬಂದಿದೆ. ಅದೇನೆಂದರೆ ನಮ್ಮ ದಕ್ಷಿಣ ಕನ್ನಡದಲ್ಲೇ ಒಂದು ಲಕ್ಷದ ಮೂವತ್ತನಾಲ್ಕು ಸಾವಿರದ ಇನ್ನೂರ ನಾಲ್ಕು ಹಸ್ತಪ್ರತಿಗಳಿವೆ. ಹಾಗಾದರೆ ಇಡಿಯ ಕರ್ನಾಟಕದಲ್ಲಿ ಎಷ್ಟಿರಬಹುದೆಂದು ಆಲೋಚಿಸಬೇಕು. ಎಂದರು.
ಅನೇಕರು ಅನೇಕ ಸಂದರ್ಭಗಳಲ್ಲಿ ತಮ್ಮ ಮನೆಗಳಲ್ಲಿದ್ದ ಹಸ್ತಪ್ರತಿಗಳನ್ನು ನಾಶ ಮಾಡಿರುವುದು ಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ನೀಡಿದೆ ಎನ್ನಬಹುದು. ವಿವಿಧ ಮೂಲ ಪದಾರ್ಥಗಳನ್ನು ಸೇರಿಸಿ ಚಿನ್ನ ತಯಾರಿ ಮಾಡುವ ಬಗೆಗೂ ಹಸ್ತಪ್ರತಿಯೊಂದರಲ್ಲಿ ಮಾಹಿತಿ ನೀಡಲಾಗಿತ್ತು. ದುರಂತವೆಂದರೆ ಆ ಹಸ್ತಪ್ರತಿ ದೊರೆತವರು ಕಾನೂನಿನ ಭಯದಿಂದ ಅದರ ಮಾಹಿತಿ ಪಡೆದು ಮಲಪ್ರತಿಯನ್ನು ಸುಟ್ಟುಹಾಕಿದ್ದಾರೆ. ಇಂತಹ ಅಮೋಘ ಮಾಹಿತಿಯಿದ್ದ ಅನೇಕ ಸಂಖ್ಯೆಯ ಹಸ್ತಪ್ರತಿಗಳನ್ನು ಎಸೆದಿರುವುದು, ನೀರಿಗೆ ಹಾಕಿರುವುದರ ಬಗೆಗೆ ಮಾಹಿತಿಯಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಎಸ್.ಡಿ.ಎಂ.ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಸಂಪತ್ ಕುಮಾರ್ ಬಿ.ಪಿ ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ವೈಯಕ್ತಿಕ ಲಾಭ ಕಮ್ಮಿ. ಹಾಗಾಗಿ ಹೆಚ್ಚಿನವರಿಗೆ ಈ ಕ್ಷೇತ್ರದ ಬಗೆಗೆ ತುಡಿತ ಇರುವುದಿಲ್ಲ. ಆದುದರಿಂದ ಸಾಹಿತ್ಯಕ್ಕಾಗಿ ದುಡಿದವರನ್ನು ಗುರುತಿಸುವುದು ಅತ್ಯಂತ ಅಗತ್ಯ. ಪ್ರೊ.ಎಸ್.ಡಿ.ಶೆಟ್ಟಿಯವರು ಮೌನ ಸಾಧಕ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ಭವಿಷ್ಯದಿಂದ ಪಾಠ ಕಲಿಯದವನು ಭವಿಷ್ಯವನ್ನು ರೂಪಿಸಲಾರ ಮತ್ತು ವರ್ತಮಾನದಲ್ಲಿ ಜೀವಿಸಲಾರ ಎಂಬ ಮಾತಿದೆ. ಅದರಂತೆ ಹಿಂದಿನವರಿಂದ ನಾವು ಜ್ಞಾನವನ್ನು ಪಡೆಯಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಎ.ವಿ.ನಾರಾಯಣ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕ ರವಿರಾಮ ಅವರು ರಚಿಸಿದ ’ವಿಸ್ತಾರ’ ಕೃತಿಯನ್ನು ಪ್ರೊ.ಎಸ್.ಡಿ.ಶೆಟ್ಟಿ ಬಿಡುಗಡೆಗೊಳಿಸಿದರು. ವಿದ್ಯಾರ್ಥಿನಿ ಪ್ರಥಮಾ ಉಪಾಧ್ಯಾಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ.ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.