ಶೇರು ಮಾರುಕಟ್ಟೆ ಅನೇಕ ಅವಕಾಶಗಳನ್ನು ಹೊಂದಿದೆ : ರಘುನಂದನ್
ಪುತ್ತೂರು: ಹೂಡಿಕೆಯಲ್ಲಿ ಅನೇಕ ವಿಧಾನಗಳಿವೆ. ಬ್ಯಾಂಕ್, ಭೂಮಿ, ಚಿನ್ನಾಭರಣ ಹೀಗೆ ವಿವಿಧ ಕಡೆಗಳಲ್ಲಿ ಹಣವನ್ನು ಹೂಡುವುದಕ್ಕೆ ಸಾಧ್ಯವಿದೆ. ಶೇರು ಮಾರುಕಟ್ಟೆ ಕೂಡ ಅಂತಹ ಹೂಡಿಕೆಯ ಸಾಧ್ಯತೆಗಳಲ್ಲೊಂದು ಎಂದು ಶೇರು ಮಾರುಕಟ್ಟೆ ತಜ್ಞ ಬಿ.ವಿ.ರಘುನಂದನ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಎಂ.ಕಾಂ ಇಭಾಗದ ಆಶ್ರಯದಲ್ಲಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೂಡಿಕೆ ಸಾಧ್ಯತೆಯ ಬಗೆಗೆ ಮಾಹಿತಿ ನೀಡಿದರು.
ಶೇರು ವಹಿವಾಟು ಅನೇಕ ಅವಕಾಶಗಳನ್ನು ಹೊಂದಿದೆಯಾದರೂ ಈ ಕ್ಷೇತ್ರದಲ್ಲಿ ಹಣ ತೊಡಗಿಸುವವರ ಸಂಖ್ಯೆ ಕೇವಲ ಶೇಕಡ ೩ ಮಾತ್ರ. ಶೇರು ವ್ಯವಹಾರದಲ್ಲಿ ಏರು ಪೇರು ಸಾಮಾನ್ಯ. ಸರಿಯಾಗಿ ಬುದ್ಧಿವಂತಿಕೆಯಿಂದ ಹೂಡಿಕೆ ನಡೆಸಿದಲ್ಲಿ ಮಾತ್ರ ಲಾಭ ಗಳಿಸಬಹುದು. ಕಂಪೆನಿಯ ಮಾರುಕಟ್ಟೆ ಬೆಲೆಯನ್ನು ಗಮನಿಸಿ ದೀರ್ಘಕಾಲಿಕವಾಗಿ ಹಣ ಹೂಡಿದರೆ ಮಾತ್ರ ಹೆಚ್ಚಿನ ಪ್ರಯೋಜನ ಕಾಣಬಹುದು ಎಂದು ನುಡಿದರು.
ಶೇರು ಕ್ಷೇತ್ರದಲ್ಲಿ ಅಪಾಯವೂ ಹೆಚ್ಚು, ಅವಕಾಶವೂ ಹೆಚ್ಚು. ಆದ್ದರಿಂದ ಎಚ್ಚರಿಕೆಯ ನಡೆ ಅತ್ಯಂತ ಅಗತ್ಯ. ಬ್ರೋಕರ್‌ಗಳನ್ನು ನಿಗದಿಪಡಿಸುವಾಗಲೂ ಎಚ್ಚರಿಕೆಯಿಂದಿರಬೇಕು. ಸರಿಯಾದ ಬ್ರೋಕರ್ ಮೂಲಕ ವ್ಯವಹಾರ ನಡೆಸಬೇಕು ಎಂದು ಕರೆ ನೀಡಿದರು. ಎಂ.ಕಾಂ.ವಿದ್ಯಾರ್ಥಿನಿ ಶ್ರೀ ರಕ್ಷಾ ಪ್ರಾರ್ಥಿಸಿದರು. ಎಂ.ಕಾಂ. ವಿಭಾಗದ ಸಂಯೋಜಕಿ ವಿಜಯ ಸರಸ್ವತಿ ಸ್ವಾಗತಿಸಿ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಪುಣ್ಯ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.