ವಿವೇಕಾನಂದದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರ ಬಿಡುಗಡೆ
ಪುತ್ತೂರು: ಪತ್ರಿಕೋದ್ಯಮ ಇಂದು ನಿರೀಕ್ಷೆಗೂ ಮೀರಿ ಬೆಳಿಯುತ್ತಿದ್ದು ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ. ಕಳೆದ ಒಂದು ದಶಕದಲ್ಲಿ ಪತ್ರಿಕೋದ್ಯಮ ಅಮೋಘ ಬದಲಾವಣೆಗಳನ್ನು ಕಂಡಿದೆ. ಪ್ರಸ್ತುತ ಕಾಲಘಟ್ಟದ ಅಗತ್ಯತೆಗೆ ಅನುಗುಣವಾಗಿ ತಯಾರಾಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ ಎಂದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳವಾರ ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಿದ ಇಮಾನ್ದಾರ್ ಎನ್ನುವ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಕೇವಲ ಬರವಣಿಗೆಯಷ್ಟೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಡಿಯಿಡಲು ಬೇಕಾಗಿದ್ದ ಅರ್ಹತೆಯಾಗಿತ್ತು. ಆದರೆ ಈಗ ಬರವಣಿಗೆಯೊಂದಿಗೆ ವಿನ್ಯಾಸ, ಸಂಕಲನ, ಕ್ಯಾಮರಾ ಕಾರ್ಯ, ಭಾಷಾಂತರ, ಸ್ಕ್ರಿಪ್ಟ್ ಬರವಣಿಗೆಯೇ ಮೊದಲಾದ ಹತ್ತು ಹಲವು ವಿಚಾರಗಳು ಪತ್ರಿಕೋದ್ಯಮಕ್ಕೆ ಅನಿವಾರ್ಯವೆನಿಸಿವೆ. ಹಾಗಾಗಿ ವಿದ್ಯಾರ್ಥಿಗಳು ಸಮಗ್ರವಾಗಿ ತಮ್ಮನ್ನು ತಾವು ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಿರುಚಿತ್ರವನ್ನು ತಯಾರಿಸುವುದು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರವಲ್ಲದೆ ಕಲಿಕೆಯ ದೃಷ್ಟಿಯಿಂದಲೂ ಅತ್ಯಂತ ಸ್ವಾಗತಾರ್ಹ. ಸಿನಿಮಾ ಕ್ಷೇತ್ರಕ್ಕೆ ಹೋಲಿಸುವಾಗ ಅತ್ಯಂತ ಕನಿಷ್ಟ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಸೌಕರ್ಯಗಳನ್ನೇ ಬಳಸಿ ಸಿನಿಮಾ ಮಾಡುವುದು ವಿದ್ಯಾರ್ಥಿಗಳ ಹೆಚ್ಚುಗಾರಿಕೆ. ಇದೊಂದು ಅತ್ಯಂತ ಸವಾಲಿನ ಕಾರ್ಯವೂ ಹೌದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ ಪತ್ರಿಕೋದ್ಯಮ ವಿಭಾಗವು ಈಗಾಗಲೇ ಅನೇಕ ಕಿರಚಿತ್ರಗಳನ್ನು ರಚಿಸಿದ್ದು ವಿದ್ಯಾರ್ಥಿಗಳು ಅನೇಕ ತಾಂತ್ರಿಕ ವಿಚಾರಗಳನ್ನು ಕಲಿಯುತ್ತಿದ್ದಾರೆ. ಸಿನಿಮಾದಿಂದ ಸಿನಿಮಾಕ್ಕೆ ತಾಂತ್ರಿಕತೆಯ ಮಟ್ಟ ವೃದ್ಧಿಸುತ್ತಿರುವುದು ಖುಷಿ ತರುವ ವಿಚಾರ ಎಂದರು.
ವೇದಿಕೆಯಲ್ಲಿ ಸಿನೆಮಾ ನಿರ್ದೇಶಕ ಪ್ರವೀಣ್ ರಾಜ್ ಯಾದವ್ ಉಪಸ್ಥಿತರಿದ್ದು ಅನುಭವ ಹಂಚಿಕೊಂಡರು. ವಿದ್ಯಾರ್ಥಿನಿ ವಿನುಮಾ ಎಂ.ಎಸ್ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್.ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿನಿಯರಾದ ಪ್ರಿಯಾ ಕೆ.ಎಸ್ ಹಾಗೂ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು.