ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರ ಸಿಗ್ ಬಿಡುಗಡೆ
ಪುತ್ತೂರು: ವಿಷಯವೊಂದನ್ನು ಪರಿಣಾಮಕಾರಿಯಾಗಿ ಹೇಳುವ ಮಾಧ್ಯಮವಾಗಿ ಸಿನೆಮಾ ಬೆಳೆದಿದೆ. ನಿಗದಿತ ಸಮಯ, ಚೌಕಟ್ಟಿನೊಳಗೆ ಜನರ ಅಂತರಾಳವನ್ನು ಮುಟ್ಟುವಂತೆ ಸಿನೆಮಾವೊಂದು ರೂಪುಗೊಂಡಾಗ ಅದು ಜನಮನದಲ್ಲಿ ಸ್ಥಾಯಿಯಾಗಿ ಉಳಿಯುತ್ತದೆ. ಸಿನೆಮಾದ ಬಗೆಗೆ ವಿದ್ಯಾರ್ಥಿಗಳು ಆಸಕ್ತಿ ಹೊಂದಿ ಕಿರುಚಿತ್ರಗಳನ್ನು ಹೊರತರುವುದು ಸ್ವಾಗತಾರ್ಹ ಸಂಗತಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಸುನಿಲ್ ಹೆಗ್ಡೆ ಹೇಳಿದರು.
ಅವರು ಸೋಮವಾರ ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಸಿಗ್ ಅನ್ನುವ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇಂದು ಸಿನೆಮಾ ರಂಗದಲ್ಲೂ ಅನೇಕ ಅವಕಾಶಗಳು ಸೃಷ್ಟಿಯಾಗಿವೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಸಿನೆಮಾ ಕುರಿತಾದ ಅಧ್ಯಯನ ಹಾಗೂ ಪ್ರಾಯೋಗಿಕ ಕಾರ್ಯದಲ್ಲಿ ತೊಡಗುವುದು ಭವಿಷ್ಯಕ್ಕೆ ಪೂರಕವೆನಿಸುತ್ತದೆ. ಎಷ್ಟು ಹೊತ್ತಿನ ಸಿನೆಮಾ ಮಾಡುತ್ತೇವೆ ಅನ್ನುವುದು ಮುಖ್ಯವಲ್ಲ, ಅನುಭವವನ್ನು ಪಡೆದುಕೊಳ್ಳುತ್ತಿದ್ದೇವೆ ಅನ್ನುವುದಷ್ಟೇ ಮುಖ್ಯ. ಎರಡು ನಿಮಿಷದ ಸಿನೆಮಾ ಸಿದ್ಧಗೊಳ್ಳುವುದರ ಹಿಂದೆ ಇಪ್ಪತ್ತಕ್ಕೂ ಹೆಚ್ಚು ದಿನಗಳ ಶ್ರಮ ಅಡಗಿರುವುದನ್ನು ಗಮನಿಸಬೇಕು ಮತ್ತು ಅದು ಕಲ್ಪಿಸಿಕೊಟ್ಟ ಅನುಭವವನ್ನು ಯೋಚಿಸಬೇಕು ಎಂದರು.
ನಮ್ಮ ಜಿಲ್ಲೆಯ ಪದವಿ ಕಾಲೇಜುಗಳಲ್ಲಿನ ಪತ್ರಿಕೋದ್ಯಮ ವಿಭಾಗಗಳಲ್ಲಿ ಬೆರಳೆಣಿಕೆಯ ವಿಭಾಗಗಳ ವಿದ್ಯಾರ್ಥಿಗಳು ಮಾತ್ರ ದೃಶ್ಯ ಮಾಧ್ಯಮದ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತದೆ. ಅಂತಹ ಕೆಲವೇ ವಿಭಾಗಗಳಲ್ಲಿ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗವೂ ಒಂದು. ಇಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಿರಂತರವಾಗಿ ಕ್ರಿಯಾಶೀಲರಾಗಿರುವುದು ವಿಕಸನ ಪತ್ರಿಕೆ, ವಿಕಸನ ವಾರ್ತಾಗುಚ್ಛ ಹಾಗೂ ವಿವಿಧ ಕಿರುಚಿತ್ರಗಳ ಮೂಲಕ ವ್ಯಕ್ತಗೊಳ್ಳುತ್ತಿವೆ. ಹೀಗೆ ಮುದ್ರಣ ಮಾಧ್ಯಮದೊಂದಿಗೆ ಸಿನೆಮಾ ಮಾಧ್ಯಮದಲ್ಲೂ ವಿದ್ಯಾರ್ಥಿಗಳು ರೂಪುಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ ತನ್ನಲ್ಲಿ ಮೂಡಿದ ಭಾವನೆಗಳನ್ನು ಸ್ವತಃ ತಾನು ಅನುಬವಿಸುವುದಲ್ಲದೆಯೇ ಇತರರಿಗೂ ವರ್ಗಾಯಿಸುವ ಕಲೆ ಕರಗತಗೊಂಡಿದ್ದರೆ ಮಾತ್ರ ಉತ್ತಮ ಸಿನೆಮಾ ನಿರ್ಮಾಣಗೊಳ್ಳಲು ಸಾಧ್ಯ. ಈಗಾಗಲೇ ಮತ್ತೊಬ್ಬರು ಹೇಳಿರುವ ಸಂಗತಿಗಿಂತ ಭಿನ್ನವಾದ ಸಂಗತಿಯೊಂದನ್ನು ಪ್ರಸ್ತುತಪಡಿಸಿದಾಗ ಸಿನೆಮಾ ಹೆಚ್ಚು ಪರಿಣಾಮಕಾರಿಯೆನಿಸಲು ಸಾಧ್ಯ. ಸುತ್ತಲಿನ ವಸ್ತುವಿಷಯಗಳನ್ನು ಕಣ್ಣರಳಿಸಿ ಕಾಣಬಲ್ಲವನಿಗೆ ಪ್ರತಿಯೊಂದರಲ್ಲೂ ಕಥೆಯೊಂದರ ಎಳೆಯನ್ನು ಕಂಡುಹುಡುಕುವುದಕ್ಕೆ ಸಾಧ್ಯ. ವಿದ್ಯಾರ್ಥಿಗಳು ಈ ಹಿನ್ನಲೆಯಲ್ಲಿ ಯೋಚಿಸಿ ಹೊಸ ಸಂಗತಿಗಳನ್ನು ಚಿತ್ರದಲ್ಲಿ ಸಾಕಾರಗೊಳಿಸುವ ಯತ್ನ ಮಾಡಬೇಕು ಎಂದರು.
ವೇದಿಕೆಯಲ್ಲಿ ಚಿತ್ರದ ನಿರ್ದೇಶಕ ಹಾಗೂ ಸಂಕಲನಕಾರ, ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ ಪ್ರಸಾದ್ ಆಚಾರ್ಯ ಕೊಲತ್ತಡ್ಕ ಉಪಸ್ಥಿತರಿದ್ದು, ಸಿನೆಮಾ ರೂಪುಗೊಂಡ ಬಗೆಯನ್ನು ವಿವರಿಸಿದರು.
ವಿಕಸನ ವಾರ್ತಾಗುಚ್ಛದ ಸಂಪಾದಕಿ ಸೃಜನಿ ರೈ ಎಸ್ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪನ್ಯಾಸಕಿ ಭವ್ಯ ಆರ್ ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿ ಪ್ರಣವ ಕೆ ಕಾರ್ಯಕ್ರಮ ನಿರ್ವಹಿಸಿದರು.