ಕ್ರೀಡಾ ಸಾಧನೆ ಜೀವನದ ಯಶಸ್ಸಿನ ಮೆಟ್ಟಿಲು : ಪ್ರಕಾಶ್
ಪುತ್ತೂರು: ಉನ್ನತ ಕ್ರೀಡಾಸಾಧನೆಗಳಿಂದ ಜೀವನದಲ್ಲಿ ಯಶಸ್ಸಿನ ಹಂತಕ್ಕೇರಲು ಸಾಧ್ಯವಾಗಿರುವುದಲ್ಲದೇ ಸಮಾಜದಲ್ಲಿ ಗೌರವ ಸ್ಥಾನಪ್ರಾಪ್ತಿಯಾಗಲು ಕಾರಣವಾಗಬಲ್ಲುದು. ಉನ್ನತ ಮಟ್ಟದ ಕ್ರೀಡಾ ಸಾಧನೆಯು ಜೀವನೋಪಾಯದ ಉದ್ಯೋಗ ಕ್ಷೇತ್ರವಾಗಿ ಇಂದು ಬೆಳವಣೆಗೆಯನ್ನು ಕಂಡಿದೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಶಿಸ್ತಿನಿಂದ ಹಾಗೂ ಅರ್ಪಣಾ ಮನೋಭಾವದಿಂದ ಕ್ರೀಡಾ ಸಾಧನೆಯನ್ನು ಮಾಡ ಬೇಕು ಎಂದು ರಾಷ್ಟ್ರೀಯ ವೇಟ್ಲಿಪ್ಟಿಂಗ್ ಚಾಂಪಿಯನ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಕಾಶ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ತಾನು ಇಂದು ಈ ಸ್ಥಾನಕ್ಕೇರಲು ತನಗೆ ಈ ಕಾಲೇಜಿನಲ್ಲಿ ದೊರೆತ ಕ್ರೀಡಾ ಪ್ರೋತ್ಸಾಹ ಕಾರಣ. ಅಲ್ಲದೇ ವೆಚ್ಚದಾಯಕ ಕ್ರೀಡೆಯಾದ ವೇಟ್ಲಿಪ್ಟಿಂಗ್ಗೆ ಬೇಕಾದ ವ್ಯವಸ್ಥೆಯನ್ನು ಕಾಲೇಜಿನಲ್ಲಿ ಒದಗಿಸಿ ಪ್ರೋತ್ಸಾಹಿಸಿದ ಕಾರಣ ಈ ಮಟ್ಟದ ಸಾಧನೆ ಸಾಧ್ಯವಾಯಿತು. ಇದಕ್ಕಾಗಿ ಕಾರಣ ಕರ್ತರಾದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ವಿಲ್ಸನ್ ಪ್ರಭಾಕರ್ ರಾಷ್ಟ್ರಮಟ್ಟದ ಕ್ರೀಡಾಸಾಧನೆ ಮಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಇಂದು ಸಮಾಜದಲ್ಲಿ ಉನ್ನತಸ್ಥಾನಮಾನ ಗಳಿಸಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ಕೂಡ ವಿಶೇಷ ಸಾಧನೆಯನ್ನು ಮಾಡಬೇಕು. ವಿದ್ಯಾರ್ಥಿಗಳು ತನ್ನ ಪೂರ್ತಿ ಸಾಮರ್ಥ್ಯ ಹೊರಹೊಮ್ಮುವ ಹಾಗೆ ಪ್ರಯತ್ನಶೀಲರಾಗಬೇಕು. ಸಿಕ್ಕಿದ ಅವಕಾಶವನ್ನು ಕಾರ್ಯ ರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನುಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲಕ ಪ್ರೊ. ಕೃಷ್ಣ ಕಾರಂತ್, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರವಿಶಂಕರ್ ವಿ. ಎಸ್. ಹಾಗೂ ಡಾ ಜ್ಯೋತಿ ಕುಮಾರಿ, ಕ್ರೀಡಾ ಕಾರ್ಯದರ್ಶಿ ಖಲಂದರ್ ಶಾಹಲ್, ಜೊತೆ ಕ್ರೀಡಾ ಕಾರ್ಯದರ್ಶಿ ಕೃಪಾ ಎಸ್. ಆರ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ವಾರ್ಷಿಕೋತ್ಸವಕ್ಕೆ ಸಂಬಂಧ ಪಟ್ಟು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಉಪನ್ಯಾಸಕರಾದ ಹರಿಪ್ರಸಾದ್ ಸ್ವಾಗತಿಸಿ, ಭಾಮಿ ಅತುಲ್ ಶೆಣೈ ವಂದಿಸಿದರು. ವಿದ್ಯಾರ್ಥಿ ಶೋಭಿತ್ ಜಿ, ರೈ ಕಾರ್ಯಕ್ರಮ ನಿರೂಪಿಸಿದರು.