ವಿವೇಕಾನಂದದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ
ಪುತ್ತೂರು: ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿರುವವರು ಮಾನವರೇ. ಇದು ನಮ್ಮ ಮಾನಸಿಕ ಬೆಳವಣಿಗೆ ಇನ್ನೂ ಪಕ್ವಗೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದಲೇ ಮನುಕುಲದ ಇತಿಹಾಸ, ಹಾಗೂ ಮನೋದೈಹಿಕ ಬೆಳವಣಿಗೆಯ ಬಗೆಗೆ ವಿವರವಾಗಿ ಚರ್ಚೆ ನಡೆಯಬೇಕು. ಮನುಷ್ಯನು ಮನುಷ್ಯನಾಗಿ ಬದುಕುವ ವಿಚಾರವಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕವಾಗಿ ಚಿಂತಿಸಬೇಕು ಎಂದು ಪುತ್ತೂರಿನ ಹೆಚ್ಚುವರಿ ನ್ಯಾಯಾಧೀಶ ಶರವಣನ್ ಎಸ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಸಹಯೋಗದೊಂದಿಗೆ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾದ ಯು.ಜಿ.ಸಿ ಪ್ರಾಯೋಜಿತ ಮಾನವ ಹಕ್ಕುಗಳು : ಮಹಿಳೆಯರು, ಮಕ್ಕಳು ಮತ್ತು ರೈತರು ಎದುರಿಸುವ ಸವಾಲುಗಳು ಎಂಬ ವಿಷಯದ ಬಗೆಗಿನ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಾದವನು ತನ್ನ ಭಾವನೆಗಳನ್ನು ಹತ್ತಿಕ್ಕಲಾಗದ ಸ್ಥಿತಿಯಲ್ಲಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದು ಕಷ್ಟವೆನಿಸುತ್ತದೆ. ಮಾನವ ಹಕ್ಕುಗಳ ರಕ್ಷಣೆಯ ಬಗೆಗೆ ಯಾವುದೇ ಕಾನೂನುಗಳಿದ್ದರೂ ಮನುಷ್ಯ ಜವಾಬ್ಧಾರಿಯುತವಾಗಿ ವರ್ತಿಸದಿದ್ದಲ್ಲಿ ಕಾನೂನುಗಳು ಪುಸ್ತಕಕ್ಕಷ್ಟೇ ಸೀಮಿತಗೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಇತಿಮಿತಿಗಳನ್ನು ಅರಿತು ಬದುಕಬೇಕಾಗಿದೆ. ಮತ್ತೊಬ್ಬರಿಗೆ ತೊಂದರೆ ಕೊಟ್ಟು ಬದುಕುವ ಮನೋಭಾವವನ್ನು ಸಮಾಜ ತೊರೆಯಬೇಕು ಎಂದರು.
ಅನೇಕ ಕಾನೂನುಗಳು ಘಟನೆಯ ತರುವಾಯ ಹುಟ್ಟಿಕೊಳ್ಳುತ್ತವೆ. ಆದರೆ ಘಟನೆಯೇ ಆಗದ ರೀತಿಯಲ್ಲಿ ನಾವೆಲ್ಲಾ ವ್ಯವಹರಿಸಿದರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಮಾನವ ಹಕ್ಕುಗಳ ಬಗೆಗೆ ಹೋರಾಡುವ ಮತ್ತು ಉಲ್ಲಂಘನೆಗಳಿಗೆ ಸಾಕ್ಷಿಯಾಗುವ ಸಂದರ್ಭ ತಪ್ಪುತ್ತದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ನುಡಿದರು.
ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಕಾನೂನು ಸೇವಾ ಆಯೋಗದ ಸದಸ್ಯ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ಮಾನವ ಬರಬರುತ್ತಾ ಕ್ರೂರಿಯಾಗಿ ಬದುಕುತ್ತಿದ್ದಾನೆ. ಪ್ರತಿಯೊಬ್ಬ ಮನುಷ್ಯನಲ್ಲೂ ನರಿ, ತೋಳಗಳಂತಹ ಪ್ರಾಣಿಗಳ ಬುದ್ಧಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಕೃತಯುಗ, ತ್ರೇತಾಯುಗ, ದ್ವಾಪರ ಯುಗದಲ್ಲೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನು ಹಾಗೂ ಅದರ ವಿರುದ್ಧ ಹೋರಾಟ ನಡೆಸಿದ ಸಂದರ್ಭಗಳನ್ನು ನಾವು ಕಾಣುತ್ತೇವೆ. ಆದ್ದರಿಂದ ಅಂದಿನಿಂದ ತೊಡಗಿದಂತೆ ಇಂದಿನವರೆಗೂ ಹೋರಾಟ ನಡೆಯುತ್ತಲೇ ಇದೆ ಎಂದರು.
ಮಾನವನಿಗೆ ಇಂದು ಮಾನವನೇ ಶತ್ರುವಾಗುತ್ತಿದ್ದಾನೆ. ಮಹಿಳೆಯರು, ಮಕ್ಕಳು ಹಾಗೂ ರೈತರು ಅನೇಕ ತರಹದ ಸಮಸ್ಯೆ ಸವಾಲುಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಮಾರಾಟ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಗಾಬರಿಯಾಗುತ್ತದೆ. ಆದ್ದರಿಂದ ನಮ್ಮನ್ನು ನಾವೇ ಪರಿವರ್ತನೆಗೊಳ್ಳುವ ಹಿನ್ನಲೆಯಲ್ಲಿ ಸುಜ್ಞಾನ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ, ಕಾರ್ಯಾಗಾರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಮತ್ತು ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭೋಗ್, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ಪಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶೃತಿ ಹಾಗೂ ಶ್ರೀದೇವಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಕೆ ಪ್ರಸ್ತಾವಿಸಿದರು. ವಿಭಾಗದ ಉಪನ್ಯಾಸಕಿ ಅನಿತಾ ಕಾಮತ್ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.