ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ
ಪುತ್ತೂರು: ನಾವು ಏನಾಗಬೇಕು, ಏನ್ನನು ಸಾಧಿಸಬೇಕು ಎಂಬುದನ್ನು ನಾವು ನಿರ್ಧರಿಸಿಕೊಳ್ಳಬೇಕು. ನಮ್ಮ ಆಲೋಚನೆ, ನಡತೆಯನ್ನು ನಿಯಂತ್ರಿಸಿಕೊಳ್ಳಬಲ್ಲ ಶಕ್ತಿ ನಮಗಿರಬೇಕು. ಆ ಮೂಲಕ ನಮಗೆ ನಾವೇ ನಾಯಕರಾಗಬೇಕು ಎಂದು ಜೆ.ಸಿ.ಐ ರಾಷ್ಟ್ರೀಯ ತರಬೇತುದಾರ ಉದ್ಯಮಿ ಕೃಷ್ಣ ಮೋಹನ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ 2017-18ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿ ಬುಧವಾರ ಮಾತನಾಡಿದರು.
ವಿದ್ಯಾಭ್ಯಾಸ ಕೇವಲ ಪಠ್ಯ ಮತ್ತು ಅಂಕಕ್ಕೆ ಸೀಮಿತಗೊಳ್ಳದೆ, ಅದರ ಹೊರತಾದ ನೈತಿಕ ಶಿಕ್ಷಣದ ಕುರಿತೂ ವಿಸ್ತಾರವಾಗಬೇಕಾಗಿದೆ. ಚುನಾವಣೆ ಕೇವಲ ಕಾಲೇಜಿಗಷ್ಟೇ ಅಲ್ಲದೆ ದೇಶದ ಭವಿಷ್ಯಕ್ಕಾಗಿ ಕೂಡ ಅಗತ್ಯವಿದೆ. ಉತ್ತಮರ ಆಯ್ಕೆಗಾಗಿ ಚುನಾವಣೆ ಅನಿವಾರ್ಯವಾಗಿದೆ. ಯುವ ಸಮುದಾಯದಿಂದ ಬದಲಾವಣೆ ಸಾಧ್ಯವಿದೆ. ಶಾಲಾ ಕಾಲೇಜಿನಲ್ಲಿ ದೊರೆತ ನಾಯಕತ್ವದ ಅನುಭವ ವಿದ್ಯಾಭ್ಯಾಸದ ನಂತರದ ಜೀವನಕ್ಕೂ ಅನ್ವಯವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಗೋಪಿನಾಥ್ ಶೆಟ್ಟಿ ಮಾತನಾಡಿ ಅಧಿಕಾರದ ಆಸೆಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗುವುದನ್ನು ತಡೆಯುವ ಶಕ್ತಿ ಯವಜನತೆಯಲ್ಲಿದೆ. ಭ್ರಷ್ಟಾಚಾರ ಅಳಿಯುವಂತೆ ಮಾಡಲು ಯುವ ಪೀಳಿಗೆಯ ರಾಜಕೀಯ ಪ್ರವೇಶ ಅಗತ್ಯವಿದೆ. ಅನುಭವ, ವಿದ್ಯೆ ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗದೆ, ಸಮಾಜದ, ದೇಶದ ಓಳಿತಿಗಾಗಿ, ಉನ್ನತಿಗಾಗಿ ವಿನಿಯೋಗವಾಗಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ್ ಪೈ ಮಾತಾಡಿ, ವಿದ್ಯಾಸಂಸ್ಥೆ ಒಂದು ಶ್ರದ್ಧಾ ಕೇಂದ್ರ. ಅದು ದೇಶಪ್ರೇಮ, ಗೌರವ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ದೇವಾಲಯವಾಗಬೇಕು. ವಿದ್ಯಾರ್ಥಿ ಸಂಘಗಳು ಒಗ್ಗಟ್ಟಾಗಿ, ಸಂಸ್ಥೆ ಹಾಗೂ ಸ್ವ ಅಭಿವೃಧ್ಧಿಗಾಗಿ ಶ್ರಮಿಸಿದಾಗ ಶೈಕ್ಷಣಿಕ ಪರಿಪೂರ್ಣತೆ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ್ ಭಟ್ ಎಮ್. ಟಿ, ಖಜಾಂಜಿ ಸೇಡಿಯಾಪು ಜನಾರ್ಧನ ಭಟ್, ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಂಕಜ್ ಎ.ಸಿ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದರು. ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ. ಕೃಷ್ಣ ಕಾರಂತ್ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಗತ್ ಡಿ.ಎಸ್. ಸ್ವಾಗತಿಸಿ, ಜತೆ ಕಾರ್ಯದರ್ಶಿ ಮೋಕ್ಷಿತಾ ಎಮ್ ವಂದಿಸಿದರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.