ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜಿನ 2018-19ರ ವಿದ್ಯಾರ್ಥಿ ಸಂಘದ ಚುನಾವಣೆ ಶನಿವಾರ ನಡೆಯಿತು. ಅಂತಿಮ ಬಿ.ಕಾಂ ಇ ವಿಭಾಗದ ಲಿಖಿತ್ ಹೆಚ್.ಎಲ್ ಅಧ್ಯಕ್ಷರಾಗಿ, ಬಿ.ಎಯ ಸಂಕೇತ್ ಕುಮಾರ್ ಎನ್ ಕಾರ್ಯದರ್ಶಿಯಾಗಿ ಹಾಗೂ ಅಂತಿಮ ಬಿ.ಸಿ.ಎ ಯ ನೀಮಾ ಎಚ್ ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ತರಗತಿವಾರು ಪ್ರತಿನಿಧಿಗಳಾಗಿ ೮೩ ಮಂದಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ನಾವು ಸದಾ ಬಿತ್ತಿದ್ದನ್ನೇ ಬೆಳೆಯುವುದಕ್ಕೆ ಸಾಧ್ಯ. ಹಾಗಾಗಿ ನಾಯಕರಾದವರು ಒಳ್ಳೆಯ ಭಾವನೆಯನ್ನು ಪಸರಿಸಬೇಕು. ಸ್ಪರ್ಧೆ ಫಲಿತಾಂಶದೊಂದಿಗೆ ಕೊನೆಯಾಗಬೇಕು. ಸೋತವರೂ, ಗೆದ್ದವರೂ ಜತೆಯಾಗಿ ಕಾರ್ಯನಿರ್ವಹಿಸಿ ಕಾಲೇಜಿನ ಘನತೆ – ಗೌರವಗಳನ್ನು ಎತ್ತರಕ್ಕೇರಿಸಬೇಕು. ಪ್ರತಿಯೊಬ್ಬರಿಗೂ ನಡತೆ ಅತ್ಯಂತ ಮುಖ್ಯ. ಅತ್ಯುತ್ತಮ ನಡತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವ ಪ್ರಯತ್ನ ನಡೆಯಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಲ್ಲೊಬ್ಬರಾದ ಪ್ರೊ.ಕೃಷ್ಣ ಕಾರಂತ ಮಾತನಾಡಿ ಚುನಾವಣಾ ಸಂಭ್ರಮಾಚರಣೆ ಮಾದರಿಯಾಗುವ ರೀತಿಯಲ್ಲಿ ನಡೆಯಬೇಕು. ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಇಲ್ಲ. ಆದರೆ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಮಾನಸಿಕ, ದೈಹಿಕ ತೊಂದರೆಯಾಗುವ ರೀತಿಯಲ್ಲಿ ವ್ಯವಹರಿಸಬಾರದು ಎಂದು ಕರೆನೀಡಿದರು.
ಕ್ಷೇಮಪಾಲನಾ ಅಧಿಕಾರಿಗಳಾದ ಕ್ಯಾ.ಡಿ.ಮಹೇಶ್ ರೈ, ಡಾ.ರೋಹಿಣಾಕ್ಷ, ಮೋತಿ ಬಾ, ವಿದ್ಯಾ ಎನ್, ರೇಖಾ, ಪ್ರೊ.ಕೃಷ್ಣ ಕಾರಂತ ಚುಣಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಹಾಗೂ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ ಸಹಕರಿಸಿದರು.