ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ – ಕರಾವಳಿ ಪ್ರದೇಶದಲ್ಲಿ ಅಧ್ಯಯನ ನಡೆಸುವುದೇ ಹೆಮ್ಮೆ: ಜನಾರ್ದನ ಭಟ್
ಪುತ್ತೂರು: ನಮ್ಮ ಕರಾವಳಿ ಪ್ರದೇಶ ಅತ್ಯಂತ ವೈವಿದ್ಯಮಯವಾದ ಭಾಷೆ, ಸಂಸ್ಕೃತಿಯಿಂದ ಕೂಡಿದೆ. ಇಂತಹ ಪರಿಸರದಲ್ಲಿ ಅಧ್ಯಯನ ಮಾಡುವುದೇ ಬಹುದೊಡ್ಡ ಹೆಮ್ಮೆಯ ವಿಚಾರ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ಧನ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ೨೦೧೫-೧೬ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿರುತ್ತದೆ. ಯಾವುದೇ ಇತರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಮರ್ಥ್ಯ ಇಲ್ಲಿಯ ಮಕ್ಕಳಲ್ಲಿರುತ್ತದೆ. ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳುವಾಗ ಕೃಷಿಯನ್ನೂ ಆಯ್ದುಕೊಳ್ಳಬೇಕು. ಕೃಷಿಯಲ್ಲೂ ಅಪಾರ ವೈವಿಧ್ಯಮಯ ಸಂಗತಿಗಳು ಅಡಕವಾಗಿವೆ. ಈ ಹಿನ್ನಲೆಯಲ್ಲಿ ಕೃಷಿಯನ್ನೂ ವಿಶೇಷ ಆದ್ಯತೆಯಾಗಿ ವಿದ್ಯಾರ್ಥಿಗಳು ಪರಿಗಣಿಸಬೇಕು ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪತ್ರಕರ್ತ ಪ್ರೊ.ವಿ.ಬಿ.ಅರ್ತಿಕಜೆ ಮಾತನಾಡಿ ನೂರಕ್ಕೆ ನೂರು ಅಂಕ ಪಡೆದೊಡನೆ ವಿವೇಕ ಜಾಗೃತವಾಗುತ್ತದೆ ಎಂದೇನಿಲ್ಲ. ಜ್ಞಾನವೇ ಬೇರೆ, ವಿವೇಕವೇ ಬೇರೆ. ಆದುದರಿಂದ ವಿವೇಕವನ್ನು ಬೆಳೆಸುವುದು ಆದ್ಯತೆಯಾಗಬೇಕು. ವಿವೇಕಾನಂದ ಅನ್ನುವುದರಲ್ಲಿ ವಿವೇಕ ಹಾಗೂ ಆನಂದ ಎರಡೂ ಇದೆ. ಗಮನಿಸಬೇಕಾದ ಸಂಗತಿಯೇನೆಂದರೆ ವಿವೇಕವನ್ನು ಬೆಳೆಸಿಕೊಂಡರೆ ಆನಂದ ತನ್ನಿಂತಾನೇ ದೊರೆಯುತ್ತದೆ ಎಂದರು.
ವಿದ್ಯಾರ್ಥಿ ಸಂಘ ಯಾವುದೇ ಕಾರ್ಯ ಮಾಡುವ ಮೊದಲು ಯೋಜನೆ, ಯೋಜನೆ ಮಾಡಬೇಕು. ಇದರೊಂದಿಗೆ ಅತ್ಯಂತ ಪ್ರೀತಿಯಿಂದ ಆ ಕೆಲಸವನ್ನು ಕಾರ್ಯಗತಗೊಳಿಸಬೇಕು. ಇದಕ್ಕೆ ಯಾಜನ ಎಂದು ಹೆಸರು. ಇಷ್ಟಲ್ಲದೆ ಸಾಧನ ಎಂಬುದೊಂದಿದೆ. ಇದರರ್ಥ ಮಾಡಿದ ಕೆಲಸ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಕಾಳಜಿಯಿಂದ ಗಮನಿಸುವುದು. ಇದಾದ ನಂತರ ಇತರರಿಗೆ ಬೋಧನೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ಈ ದೇಶದ ಪ್ರಧಾನಿಯವರು ನುಡಿದಂತೆ ಸ್ವಚ್ಚ ಭಾರತದ ಸಕಾರಕ್ಕೆ ನಾವೆಲ್ಲರೂ ಶ್ರಮವಹಿಸಬೇಕು. ವಿದ್ಯಾರ್ಥಿಗಳು ತಾವು ಕೇಳಿದ ಪಾಠ ಪ್ರವಚನಗಳ ಬಗೆಗೆ ಅಧ್ಯಾಪಕರೊಂದಿಗೆ ಚರ್ಚಿಸಬೇಕು ಎಂದರಲ್ಲದೆ ವಿದ್ಯಾರ್ಥಿಗಳನ್ನು ಹಾಳು ಮಾಡುವ ಅನೇಕ ಸಂಗತಿಗಳು ಸುತ್ತಮುತ್ತ ಇವೆ. ಆದರೆ ವಿದ್ಯಾರ್ಥಿಗಳು ಈ ಬಗೆಗೆ ಜಾಗೃತೆ ವಹಿಸಿ ಸಮಾಜಕ್ಕೆ ಕೀರ್ತಿ ತರುವಂತೆ ಬೆಳೆಯಬೇಕು ಎಂದು ಕರೆನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಲ್ಲೊಬ್ಬರಾದ ಪ್ರೊ.ಕೃಷ್ಣ ಕಾರಂತ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಕ್ಯಾ.ಡಿ.ಮಹೇಶ್ ರೈ, ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ಪ್ರಥಮ ಹಾಗೂ ಶ್ರೀಕೃತಿ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಪೂಜಾ ಎಂ.ಎನ್ ಸ್ವಾಗತಿಸಿದರು. ಕಾರ್ಯದರ್ಶಿ ಪವನ್ ಕುಮಾರ್ ಎನ್ ವಂದಿಸಿದರು. ವಿದ್ಯಾರ್ಥಿ ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು.