ಸುಸಂಸ್ಕೃತ ಮನುಷ್ಯನಾಗಬೇಕಾದರೆ ಸಾಹಿತ್ಯ ಅಗತ್ಯ : ವಿಜಯ ಸರಸ್ವತಿ
ಪುತ್ತೂರು: ಸುಸಂಸ್ಕೃತ ಮನುಷ್ಯನೆಂದೆನಿಸಿಕೊಳ್ಳಲು ಸಾಹಿತ್ಯಬೇಕು. ಸಾಹಿತ್ಯ ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ತಿಳಿಸಿಕೊಡುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿ ಸಾಹಿತ್ಯದ ಬಗೆಗಿನ ಶಿಕ್ಷಣ ಅತೀ ಅಗತ್ಯ. ಅದಕ್ಕಾಗಿ ವಿದ್ಯಾಲಯಗಳಲ್ಲಿ ಮಾತ್ರ ಸಾಹಿತ್ಯ ಸಂಘಟನೆಗಳು ಇರುವುದಲ್ಲದೇ ಸಾಮಾಜಿಕವಾಗಿಯೂ ಸಂಘಟನೆಗಳ ಅವಶ್ಯಕತೆ ಇದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿಜಯ ಸರಸ್ವತಿ ಹೇಳಿದರು.
ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ತೃತೀಯ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳು ಆಯೋಜಿಸುತ್ತಿರುವ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.
ಸಾಹಿತ್ಯ ಪ್ರಪಂಚ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ಅದನ್ನು ಮಥಿಸಿದಷ್ಟು ಅಮೂಲ್ಯ ರತ್ನಗಳು ಸೃಜಿಸುತ್ತve. ಸಂಸ್ಕೃತಿಯನ್ನು ಸಂಸ್ಕಾರವನ್ನು ಬಿಂಬಿಸುವ ಮಾಧ್ಯಮವಾಗಿರುವ ಸಾಹಿತ್ಯ ಸಾಮಾಜಿಕ ಕಳಕಳಿಯನ್ನು ಬಿಂಬಿಸಬಲ್ಲುದು. ತಾನು ಅನುಭವಿಸಿದ ವಿಚಾರವನ್ನು ಸಾಹಿತ್ಯದ ಮೂಲಕ ಹಿಡಿದಿಡಬಹುದು. ಸಾಹಿತ್ಯ ವಿವಿಧ ಮಜಲುಗಳನ್ನು ಹೊಂದಿದ್ದು ಅದರಿಂದ ಆ ಕಾಲದ ವಿಚಾರ ಧಾರೆಗಳನ್ನು ತಿಳಿಯಲು ಅನುಕೂಲವಾಗುತ್ತದೆ ಎಂದರು.
ಬರವಣಿಗೆಗಳು ಅನುಭವಗಳನ್ನು ಬಿಂಬಿಸುವ ಮಾಧ್ಯಮ ಮಾತ್ರವಾಗಿರದೆ ಏಕಕಾಲದಲ್ಲಿ ಆ ಕಾಲಮಾನದ ವಾಣಿಜ್ಯ, ವಿಜ್ಞಾನ, ತರ್ಕ ಮುಂತಾದ ವಿಚಾರಗಳಿಗೆ ಮಣೆಹಾಕುತ್ತದೆ. ಮಾತ್ರವಲ್ಲದೇ ಒಬ್ಬ ಪ್ರಜ್ಞಾವಂತ ಬರಹಗಾರನಿಂದ ಅರ್ಥಪೂರ್ಣ ಸಾಹಿತ್ಯದ ಸೃಷ್ಟಿ ಸಾಧ್ಯ. ಒಂದು ಬರಹ ಹುಟ್ಟಿದೆ ಎಂದರೆ ಅದು ಆರಂಭ. ಹಾಗೆಂದು ಅದು ಕೊನೆಗೊಂಡ ತಕ್ಷಣ ಅದು ಕೊನೆಯಾಗುವುದಿಲ್ಲ. ಬದಲಾಗಿ ಇನ್ನೊಂದರ ಆರಂಭಕ್ಕೆ ನಾಂದಿಯಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕಿ ಡಾ. ಗೀತಾ ಕುಮಾರಿ ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಯಶ್ರೀ ಇಡ್ಕಿದು, ಶ್ಯಾಮಲ, ಶ್ರೀವತ್ಸ ಟಿ.ಎಸ್, ಶರಣ್ಯ ತಮ್ಮ ಕವನ, ಕಥೆಯನ್ನು ವಾಚಿಸಿದರು. ವಿದ್ಯಾರ್ಥಿನಿ ವೀಣಾ ಸ್ವಾಗತಿಸಿ, ಪುಣ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ರೇಖಾ ವಂದಿಸಿದರು.