VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ವಿದ್ಯಾರ್ಥಿಗಳಿಂದ ಸ್ವಚ್ಚತಾ ಆಂದೋಲನ

ಪುತ್ತೂರು: ಸ್ವಚ್ಚತೆಯ ಅರಿವನ್ನು ಮನೆ ಮನೆಗೆ ನೀಡುವ ಕೆಲಸವಾಗಬೇಕಾಗಿದೆ. ನಮಗೆ ತಿಳಿದಿರುವ ಮಾಹಿತಿಯನ್ನು ಉತ್ತಮ ರೀತಿಯಾಗಿ ಜನರ ಮನಮುಟ್ಟುವಂತೆ ನೀಡಬೇಕು. ಸ್ವಚ್ಚತೆಯ ಪರಿಕಲ್ಪನೆಯನ್ನು ಅನುಷ್ಠಾನ ಮಾಡುವುದು ಮಾತ್ರವಲ್ಲದೇ ಆಸಕ್ತಿಯಿಂದ ಮುಂದುವರಿಸಬೇಕು. ಬಟ್ಟೆ ಚೀಲಗಳ ಬಳಕೆಯಿಂದ ಆಗುವ ಉಪಯೋಗವನ್ನು ಶ್ರೀಸಾಮಾನ್ಯರು ಅರಿಯಬೇಕು. ಅದಕ್ಕಾಗಿ ಜನರಿಗೆ ಬಟ್ಟೆ ಚೀಲವನ್ನು ಸಾಂಕೇತಿಕವಾಗಿ ನೀಡಿ ಅದರ ಮಹತ್ವವನ್ನು ವಿವರಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ. ಹೇಳಿದರು.

News Photo - E Shivaprasad

ಅವರು ವಿವೇಕಾನಂದ ಮಹಾವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್‍ಸ್ ಆಂಡ್ ರೇಂಜರ್‍ಸ್ ಘಟಕಗಳ ಸಹಯೋಗದಲ್ಲಿ ನಡೆದ ಸ್ವಚ್ಚ ಭಾರತ ಅಭಿಯಾನ -೨೦೧೫ ನಮ್ಮ ಹೆಜ್ಜೆ ಸ್ವಚ್ಚತೆಯೆಡೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಕ್ರವಾರ ಸ್ವಚ್ಚತೆಯ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮಾಡಿಸುವ ವಿದ್ಯಾರ್ಥಿ ತಂಡಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ ಶ್ರೀಶ ಕುಮಾರ್ ಯಂ. ಕೆ. ಮಾತನಾಡಿ ನಿತ್ಯೋಪಯೋಗಿ ವಸ್ತುಗಳಿಂದ ತೊಡಗಿದಂತೆ ಊಟ ಮಾಡುವ ಅಕ್ಕಿ ಕೂಡ ಪ್ಲಾಸ್ಟಿಕ್ ಮಯವಾಗುತ್ತಿರುವುದು ದುರಂತ. ಚಿಕ್ಕ ಪುಟ್ಟ ನಗರಗಳು ಸಣ್ಣ ಮಳೆಗೆ ನೆರೆ ಆವೃತವಾಗುತ್ತದೆ. ಅದಕ್ಕಾಗಿ ಎಲ್ಲರೂ ಪ್ಲಾಸ್ಟಿಕ್ ವಿರೋಧಿ ಆಂದೋಲನದಲ್ಲಿ ತೊಡಬೇಕಾಗಿದೆ. ಪ್ಲಾಸ್ಟಿಕ್ ಲಕೊಟೆಯಲ್ಲಿ ಸಿಗುವ ಹಾಲು ಕೂಡ ವಿಷಯುಕ್ತವಾಗಿರುವುದರಿಂದ ಹಾಲಿನ ಡೈರಿಗಳಿಂದಲೇ ಖರೀದಿ ಮಾಡಬೇಕು. ಇದರಿಂದಲಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್‌ವಿಲ್ಸನ್ ಪ್ರಭಾಕರ್ ಮಾತನಾಡಿ ಪ್ರಧಾನ ಮಂತ್ರಿಗಳು ಪರಿಚಯಿಸಿದ ಸ್ವಚ್ಚ ಭಾರತ ಕಲ್ಪನೆ ಉತ್ತಮ ಯೋಜನೆಯಾಗಿದ್ದು ಅದರಲ್ಲಿ ನಾವು ಕೈ ಜೋಡಿಸಬೇಕು. ಅದಕ್ಕಾಗಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಪ್ರಾಧ್ಯಾಪಕರಾದ ಪ್ರೊ.ಶಂಕರನಾರಾಯಣ ಭಟ್, ಡಾ. ಶ್ರೀಧರ ಎಚ್.ಜಿ., ಡಾ ವಿಘ್ನೇಶ್ವರ ವರ್ಮುಡಿ, ಪ್ರೊ.ನರಸಿಂಹ ಭಟ್, ಪ್ರೊ.ಕೃಷ್ಣ ಕಾರಂತ ಕೆ., ಅರುಣ್ ಪ್ರಕಾಶ್, ಹರಿಣಿ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳು ವಿವಿಧ ಭಾಗಗಳ ಮನೆಗಳಿಗೆ ತೆರಳಿ ಸ್ವಚ್ಚತೆಯ ಕುರಿತಾದ ಮಾಹಿತಿಯನ್ನು ನೀಡುವ ಮೂಲಕ ಜನಜಾಗೃತಿಯನ್ನು ಮಾಡಿದರು.