ತಾಳೆ ಕೃಷಿಕರು ಸಂಕಷ್ಟಕ್ಕೆ ಸಿಲುಕುವುದು ಕಡಿಮೆ : ವಸಂತ್ ರಾವ್
ಪುತ್ತೂರು: ಕೃಷಿಕರು ಒಂದೇ ತೆರೆನಾದ ಕೃಷಿಯನ್ನು ಆಶ್ರಯಿಸಿ ಬದುಕುವುದಕ್ಕಿಂತ ಮಿಶ್ರ ಬೆಳೆಯನ್ನು ಬೆಳೆಯಬೇಕು. ಇದರಿಂದ ಕೃಷಿಕ ನಷ್ಟ ಅನುಭವಿಸುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ತಾಳೆಕೃಷಿಯನ್ನು ಕೃಷಿಕರು ಮಾಡಬಹುದಾಗಿದೆ. ತಾಳೆಮರವನ್ನು ಬೆಳೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬೆಂಬಲವನ್ನು ನೀಡುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆ ತಾಳೆ ಕೃಷಿಗೆ ಪೂರಕ ವಾತಾವರಣವನ್ನು ಹೊಂದಿದೆ ಎಂದು ಪ್ರಗತಿ ಪರಕೃಷಿಕ ವಸಂತ್ ರಾವ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಆಯೋಜಿಸುತ್ತಿರುವ ಕೃಷಿ – ಖುಷಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಾಳೆ ಕೃಷಿಯ ಬಗೆಗೆ ಶನಿವಾರ ಮಾಹಿತಿ ನೀಡಿದರು.
ಇಂಡೊನೇಷಿಯಾ ಮತ್ತು ಮಲೇಶಿಯಾದಲ್ಲಿ ಕೃಷಿಕರು ರಬ್ಬರ್ ಗಿಡಗಳನ್ನು ತೆರವುಗೊಳಿಸಿ ತಾಳೆ ಗಿಡಗಳನ್ನು ನೆಡುತ್ತಿದ್ದು, ಇದರ ಬೇಡಿಕೆಯ ಮಟ್ಟ ಹೆಚ್ಚಾಗಿರುವುದಕ್ಕೆ ಸಾಕ್ಷಿಯಾಗಿದೆ. ತಾಳೆ ಎಣ್ಣೆ ಅಡುಗೆಗೆ ಮಾತ್ರವಲ್ಲದೇ ವಾಹನಗಳಿಗೆ ಇಂಧನವಾಗಿಯೂ ಬಳಸಲಾಗುತ್ತಿದ್ದು, ಇದರಿಂದ ೬೦ಕ್ಕೂ ಹೆಚ್ಚಿನ ಸಂಖ್ಯೆಯ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದರು.
ತಾಳೆಗಿಡ ಬೇಸಿಗೆ ಕಾಲದಲ್ಲಿಯೂ ಬೆಳೆಯಬಲ್ಲುದಾಗಿದ್ದು ಇದನ್ನು ನೆಡಲು ಇಂತದ್ದೇ ಕಾಲಘಟ್ಟ ಎಂಬುದಿಲ್ಲ. ತಾಳೆಗಿಡ ನೆರಳನ್ನು ಬಯಸುವುದಿಲ್ಲವಾದ್ದರಿಂದ ಈ ಗಿಡವು ಬೆಳೆದು ದೊಡ್ಡದಾದ ನಂತರ ಭೂಮಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯಬಹುದು. ನೀರಿನ ಪ್ರಮಾಣವೂ ಅಡಿಕೆ, ತೆಂಗಿಗಿಂತ ಬಹಳಷ್ಟು ಕಡಿಮೆ ಸಾಕಾಗುತ್ತದೆ. ಮಂಗ ಮತ್ತು ಇತರ ಪ್ರಾಣಿ, ಪಕ್ಷಿಗಳ ಕಾಟವೂ ಇರುವುದಿಲ್ಲ. ಮಾತ್ರವಲ್ಲದೇ ರೋಗ ಬಾಧೆಯೂ ಸಾಕಷ್ಟು ಕಡಿಮೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ್ ಭಟ್ ವಹಿಸಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೃಷಿ-ಖುಷಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಈ ತೆರನಾದ ಸಮಾಜಸ್ನೇಹಿ ಕಾರ್ಯಕ್ರಮಗಳಿಗೆ ಕಾಲೇಜಿನ ಆಡಳಿತ ಮಂಡಳಿ ಸಹಕಾರ ನೀಡಲಿದೆ ಎಂದರು.
ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ವಿದ್ಯಾರ್ಥಿನಿ ಬಿ.ಟಿ. ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ಶಿಲ್ಪಾ ಪೈಲೂರು ವಂದಿಸಿದರು.