ವಿವೇಕಾನಂದದಲ್ಲಿ ಲಲಿತ ಕಲಾ ಸಂಘದಿಂದ ಸಾಂಸ್ಕೃತಿಕ ಸ್ಪರ್ಧೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ಬುಧವಾರ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಕಾಲೇಜಿನ ವಿವಿಧ ತರಗತಿಗಳ ಒಟ್ಟು ೧೫ ತಂಡ ಭಾಗವಹಿಸಿದ್ದವು. ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಶಾಸ್ತ್ರೀಯ ನೃತ್ಯ, ಜನಪದ ನೃತ್ಯ, ದೇಶ ಭಕ್ತಿ ಗೀತೆ, ಮೂಕಾಭಿನಯ, ಪ್ರಹಸನ, ವಾದ್ಯ ಸಂಗೀತ, ಯಕ್ಷಗಾನ ಇತ್ಯಾದಿಗಳ ಮೂಲಕ ಸಾಕ್ಷಾತ್ಕಾರಗೊಳಿಸಿದರು.
ದಿನಪೂರ್ತಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ವ್ಯಕ್ತಿತ್ವ ವಿಕಸನಕ್ಕೆ ಪಾಠದ ಜೊತೆಗೆ ವಿವಿಧ ಕಲೆಗಳೂ ಅಗತ್ಯ. ವ್ಯಕ್ತಿಯೋರ್ವ ಕಲೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾದ್ದು ಅತ್ಯಂತ ಅಗತ್ಯವಾದದ್ದು ಎಂದು ನುಡಿದರು.
ಸ್ಪರ್ಧೆಗಳು ನಡೆದಾಗ ಸೋಲು-ಗೆಲುವು ಖಚಿತ. ಹಾಗೆಂದು ಬೇಸರಿಸಿಕೊಳ್ಳಬಾರದು. ಯಾಕೆಂದರೆ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಭಾಗವಹಿಸುವವರ ನಿಜವಾದ ಗೆಲುವು. ಅದರಲ್ಲೂ ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧೆಗಳು ಮಹತ್ತರ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಏಳು-ಬೀಳುಗಳನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿ ಮುನ್ನಡೆಯಬೇಕು ಎಂದು ಹೇಳಿದರು.
ಸ್ಪರ್ಧೆಯ ತೀರ್ಪುಗಾರರಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ನವೀನ್ ಕುಮಾರ್ ಮರಿಕೆ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸುದರ್ಶನ್ ಎಂ.ಎಲ್, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕಿ ಜಯಲಕ್ಷ್ಮಿ ಸಹಕರಿಸಿದರು.
ಕಾಲೇಜಿನ ವಾಣಿಜ್ಯ ಉಪನ್ಯಾಸಕಿ, ಲಲಿತ ಕಲಾ ಸಂಘದ ಸಂಯೋಜಕರಲ್ಲೊಬ್ಬರಾದ ವಿಜಯ ಸರಸ್ವತಿ ಪ್ರಾರ್ಥಿಸಿ, ಸ್ವಾಗತಿಸಿದರು. ಲಲಿತ ಕಲಾ ಸಂಘದ ಸಂಯೋಜಕ, ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಚ್.ಬಾಲಕೃಷ್ಣ ವಂದಿಸಿದರು. ಉಪನ್ಯಾಸಕಿಯರಾದ ಚೈತ್ರ ಹಾಗೂ ವಿದ್ಯಾ ಎಸ್ ಹಾಗೂ ಉಪನ್ಯಾಸಕ ಅತುಲ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
.