ತರಗತಿಯಲ್ಲಿ ತೂಕಡಿಸುವುದು ಅಕ್ಷಮ್ಯ ಅಪರಾಧವಲ್ಲ: ಬಾಲಕೃಷ್ಣ.ಎಚ್
ಪುತ್ತೂರು:ತರಗತಿಯಲ್ಲಿ ತೂಕಡಿಸುವುದು ಸಹಜವಾದ ಪ್ರಕ್ರಿಯೆಯಾಗಿದೆ. ಕೆಲವು ವಿದ್ಯಾರ್ಥಿಗಳು ತೂಕಡಿಸಿ ಸಮಯವನ್ನು ಕಳೆದರೆ, ಇನ್ನೂ ಕೆಲವರು ಇನ್ನೊಬ್ಬರು ತೂಕಡಿಸುತ್ತಿರುವುದನ್ನು ನೋಡಿ ಆನಂದ ಪಡುತ್ತಿರುತ್ತಾರೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ.ಎಚ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚೆಗೆ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮನಿಕರ್ಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ’ತರಗತಿಯಲ್ಲಿ ತೂಕಡಿಸುವಿಕೆ’ ಎಂಬ ವಿಷಯದ ಕುರಿತು ಮಾತನಾಡಿದರು.
ತೂಕಡಿಸುವಿಕೆ ಎಂಬುದು ಕೇವಲ ಮನುಷ್ಯನಿಗೆ ಮಾತ್ರ ಸಂಬಂಧ ಪಟ್ಟಿಲ್ಲ, ಬದಲಾಗಿ ಅದು ಈ ಜಗತ್ತಿನಲ್ಲಿ ಜೀವಿಸುವ ಪ್ರತಿಯೊಂದು ಜೀವಿಯ ಸಹಜ ಪ್ರಕ್ರಿಯೆಯಾಗಿದೆ. ಆದರೆ ತರಗತಿಯಲ್ಲಿ ವಿದ್ಯಾರ್ಥಿಗಳ ತೂಕಡಿಕೆ ಶಿಕ್ಷಕನಿಗೆ ಬಹಳ ದೊಡ್ಡ ಸವಾಲಾಗಿ ಎದುರಾಗುತ್ತದೆ. ಏಕೆಂದರೆ ವಿದ್ಯಾರ್ಥಿಗಳು ತೂಕಡಿಸದಂತೆ ಅವರನ್ನು ತನ್ನ ಪಾಠದ ಮೂಲಕ ಸೆಳೆಯಬೇಕಾದ ಅನಿವಾರ್ಯತೆ ಇರುತ್ತದೆ. ಎಂದರು.
ತರಗತಿಯಲ್ಲಿ ತೂಕಡಿಸುವುದು ಅಕ್ಷಮ್ಯ ಅಪರಾಧವೇನೂ ಅಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ತೂಕಡಿಸಲು ಎಲ್ಲಾ ರೀತಿಯ ಅವಕಾಶವಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ದೈಹಿಕವಾಗಿ ತರಗತಿಯಲ್ಲಿದ್ದರೂ, ಮಾನಸಿಕವಗಿ ಎಲ್ಲೆಲ್ಲೋ ತಿರುಗಾಡುತ್ತಿರುತ್ತಾರೆ. ತೂಕಡಿಕೆಯ ಸಂದರ್ಭದಲ್ಲಿ ಸಮಾಜದ ಯಾವುದೇ ಇತಿಮಿತಿಗಳು ಅವರಿಗಿರುವುದಿಲ್ಲ ಎಂದು ಅವರು ನುಡಿದರು.
ವಿದ್ಯಾರ್ಥಿನಿ ಪೂಜಾ ಪಕ್ಕಳ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು.