ಪ್ರವಾಸ ಒಂದು ಸ್ಪೂರ್ತಿಯ ಸೆಲೆ : ವರುಣ್ರಾಜ್
ಪುತ್ತೂರು: ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯ ಪ್ರಯಾಣ ಮಾಡುತ್ತೇವೆ. ಪ್ರಯಾಣದಿಂದ ಅನುಭವ ದೊರೆಯುತ್ತದೆ. ಜೀವನದ ರಸವತ್ತತೆ ಪಡೆಯಲು ಸಹಕಾರಿಯಾಗುತ್ತದೆ. ನಮ್ಮ ಪ್ರಯಾಣ ಸುಖಕರವಾಗಿದ್ದರೆ ಅದರಲ್ಲಿ ಯಾವುದೇ ರೀತಿಯ ಸ್ವಾರಸ್ಯವಿರುವುದಿಲ್ಲ. ಸ್ವಾರಸ್ಯವಿದ್ದಾಗ ಮಾತ್ರ ನಮ್ಮ ಕಳೆದುಹೋದ ಸಂಗತಿಗಳ ನೆನಪು ಸಿಹಿಯಾಗಿರುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ವರುಣರಾಜ್ ತಿಳಿಸಿದರು.
ಅವರು ಗುರುವಾರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿಕೊಡುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ದೂರ ತೀರ ಯಾನ ಎಂಬ ವಿಚಾರದ ಬಗೆಗೆ ಮಾತಾಡಿದರು.
ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಹಲವಾರು ವಿಷಯಗಳ ಉಪಯೋಗ ಹಾಗೂ ಭವಿಷ್ಯಕ್ಕೆ ಉಪಯುಕ್ತವಾಗುವಂತಹ ಅನುಭವಗಳ ಸರಮಾಲೆ ದೊರೆಯುತ್ತದೆ. ಇದೊಂದು ಸ್ಪೂರ್ತಿಯ ಸೆಲೆ. ಹೊಸ ಸ್ಥಳಗಳ ಪರಿಚಯ, ದೂರದ ಊರುಗಳ ಕಲೆ, ಸಾಹಿತ್ಯ, ಸಂಸ್ಕೃತಿಗಳ ತಿಳುವಳಿಕೆ ದೊರೆಯುತ್ತದೆ. ನಮಗೆ ಹೊರ ಜಗತ್ತಿನ ಬಗೆಗಿನ ಅರಿವು ದೊರೆಯುದಲ್ಲದೆ, ವಿವಿಧ ವ್ಯಕ್ತಿತ್ವದ ಜನರ ಪರಿಚಯ ಹಾಗೂ ಅವರಿಂದ ಒಂದು ತೆರೆನಾದ ಜ್ಞಾನ ಸಿಗುತ್ತದೆ. ಇದರಿಂದ ಆತ್ಮ ವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಆಶಿಕ್ ಗೌಡ, ಪ್ರಜ್ಞಾ ಬಾರ್ಯ, ಸ್ವಪ್ನ, ಪೂಜಾ, ದಿನೇಶ್ ಭುವನ ಬಾಬು ಪುತ್ತೂರು, ರಮ್ಯ, ಮೇಘಲಕ್ಷ್ಮಿ ಮರುವಾಳ ಅಲ್ಲದೆ ಪ್ರಾಣಿಶಾಸ್ತ್ರ ಉಪನ್ಯಾಸಕ ಸುಹಾಸ್ ಕೃಷ್ಣ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯದರ್ಶಿ ಪ್ರೆಸಿಲ್ಲಾ ಒಲಿವಿಯಾ ಡಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ವಿದ್ಯಾರ್ಥಿನಿ ಸುಮಯ್ಯಾ ವಿ.ಕೆ ಕಾರ್ಯಕ್ರಮ ನಿರೂಪಿಸಿದರು.