ತುಳುನಾಡು ಏಕೀಕರಣಕ್ಕೆ ಪ್ರತ್ಯೇಕ ರಾಜ್ಯದ ಅಗತ್ಯವಿದೆ :ಡಾ| ನಿರಂಜನ ರೈ
ಪುತ್ತೂರು: ನಮಗೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳೇ ಕಳೆದಿವೆ. ಈ ಆರು ದಶಕಗಳಿಂದ ತುಳುವರು ತುಳುನಾಡ ಪ್ರತ್ಯೇಕತೆಗೆ ಒತ್ತಾಯ ಮಾಡುತ್ತಲೇ ಇದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಅವರ ಈ ಬೇಡಿಕೆಯನ್ನು ಸರ್ಕಾರ ಪೂರೈಸಿಲ್ಲ. ಇದಕ್ಕೆ ಮುಖ್ಯ ಕಾರಣ ತುಳುನಾಡಲ್ಲೇ ತುಳುಭಾಷೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ಎಂದು ಖ್ಯಾತ ವೈದ್ಯ ಹಾಗೂ ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಸಮಿತಿಯ ಅಧ್ಯಕ್ಷ ಡಾ| ನಿರಂಜನ ರೈ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ತುಳು ಸಂಘ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ತುಳುನಾಡು ರಾಜ್ಯ ಎಂಬ ವಿಷಯದ ಕುರಿತು ಮಾತನಾಡಿದರು.
ತುಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಎಲ್ಲಾ ಯೋಗ್ಯತೆಗಳಿದೆ. ಆದರೂ ಅದು ಇಂದಿನವರೆಗೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಲ್ಲ. ಇದು ತುಳುವರ ದುರಂತ. ತುಳು ಯಾವುದೇ ಜಾತಿಯಾಧಾರಿತ ಭಾಷೆಯಾಗಿಲ್ಲ. ಅದು ನಮ್ಮ ಸಂಪರ್ಕ ಭಾಷೆ. ಆದರೆ ಇಂದು ತುಳು ಅವಿದ್ಯಾವಂತರ ಭಾಷೆಯೆಂಬ ತಪ್ಪು ಕಲ್ಪನೆಯಿದೆ ಎಂದು ನುಡಿದರು.
ತುಳು ಸಾವಿರಾರು ವರ್ಷಗಳ ಇತಿಹಾಸವಿರುವ ಬಹಳ ಸಂಪನ್ನವಾದ ಭಾಷೆಯಾಗಿದೆ. ಬೇರೆ ಬೇರೆ ಭಾಷೆಗಳ ಹಲವಾರು ಶಬ್ದಗಳು ತುಳುಭಾಷೆಯಲ್ಲಿ ಬೆರೆತು ತುಳು ಸಮೃದ್ಧವಾಗಿ ಬೆಳೆದಿದೆ. ಆದರೂ ಇಂದು ತುಳುಭಾಷೆಗೆ, ತುಳುನಾಡಿಗೆ ಯಾವುದೇ ಮಹತ್ವವಿಲ್ಲಂದತಾಗಿದೆ. ಬಹುಷಃ ಇದೇ ಕಾರಣಕ್ಕೆಂದೇ ತುಳುನಾಡಿಗಾಗಿ ದುಡಿದ ಯಾವುದೇ ವ್ಯಕ್ತಿಗಳಿಗೆ ಪುರಸ್ಕಾರ ಸಿಕ್ಕಿಲ್ಲ ಎಂದು ತಿಳಿಸಿದರು.
ತುಳುನಾಡು ಏಕೀಕರಣವಾಗಬೇಕಾದರೆ ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು. ಆದರೆ ನಮ್ಮ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯವನ್ನು ತೋರುತ್ತಾ ಬಂದಿದೆ. ತುಳುನಾಡು ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುತ್ತದೆ. ಆದರೆ ಅದಕ್ಕೆ ನೀಡಬೇಕಾದ ಯಾವುದೇ ಸೌಲಭ್ಯವನ್ನು ಸರ್ಕಾರ ಕೊಡುತ್ತಿಲ್ಲ. ಸರ್ಕಾರದ ದುರಾಡಳಿತ ತುಳುನಾಡ ಸಂಸ್ಕೃತಿಯನ್ನು ಹಾಳುಮಾಡುತ್ತಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಪಿ.ಕೆ ಬಾಲಕೃಷ್ಣ ಮಾತನಾಡಿ ಒಂದು ಭಾಷೆಗೆ ರಾಜಾಶ್ರಯ ಬಹಳ ಮುಖ್ಯವಾಗಿರುತ್ತದೆ. ಪಂಚದ್ರಾವಿಡ ಭಾಷೆಗಳಲ್ಲಿ ಉಳಿದ ನಾಲ್ಕು ಭಾಷೆಗಳಿಗೂ ರಾಜಮರ್ಯಾದೆ ಸಿಕ್ಕಿದೆ. ಆದರೆ ಈವರೆಗೂ ತುಳುವಿಗೆ ಯಾವುದೇ ರಂಗದಲ್ಲಿ ಮಾನ್ಯತೆ ಸಿಕ್ಕಿಲ್ಲ. ಆದ್ದರಿಂದ ತುಳುನಾಡು ಪ್ರತ್ಯೇಕತೆಗಾಗಿ ತುಳುವರೆಲ್ಲರೂ ಸ್ವಾರ್ಥ ರಹಿತ ಹೋರಾಟವನ್ನು ಮಾಡಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕ ಹಾಗೂ ಸಂಯೋಜಕ ಡಾ.ಶ್ರೀಶ ಕುಮಾರ್ ಎಂ.ಕೆ, ತುಳು ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮತ್ತು ಕಾರ್ಯದರ್ಶಿ ಶ್ರೀರಕ್ಷಾ ಚೆಲ್ಲಡ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಾತಿ ಪ್ರಾರ್ಥಿಸಿದರು. ವಿದ್ಯಾರ್ಥಿ ದೇವಿಕಿರಣ್ ವಂದಿಸಿದರು. ವಿದ್ಯಾರ್ಥಿನಿ ಪೂಜಾಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.