ವಿವೇಕಾನಂದದಲ್ಲಿ ಎರಡು ದಿನಗಳ ಸಮಾಜಶಾಸ್ತ್ರ ವಿಚಾರ ಸಂಕಿರಣ ಉದ್ಘಾಟನೆ
ಪುತ್ತೂರು: ನಮ್ಮ ಸಮಾಜದಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಜಾತಿ, ಲಿಂಗ, ಸ್ಥಾನಮಾನ ಹೀಗೆ ನಾನಾ ಸ್ಥರದಲ್ಲಿ ಅಸಮಾನತೆಗಳಿವೆ ಇವುಗಳನ್ನು ಹೋಗಲಾಡಿಸಿದಾಗಲಷ್ಟೇ ಸಮಾಜ ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯ. ಶಿಕ್ಷಿತ ಯುವ ಸಮಾಜ ನಗರದ ಆಕರ್ಷಣೆಯಿಂದ ಹೊರಬಂದು ಹಳ್ಳಿಗಳೆಡೆಗೆ ಗಮನ ಹರಿಸಿದಾಗ ದೇಶ ಬೆಳವಣಿಗೆ ಕಾಣಲು ಸಾಧ್ಯ ಎಂದು ಶಿಕ್ಷಣ ತಜ್ಞ, ಚಿಂತಕ ಪ್ರೊ.ಚಂದ್ರಶೇಖರ ದಾಮ್ಲೆ ಹೇಳಿದರು.
ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿ.ವಿ ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಪ್ರೊ.ಟಿ.ಕೆ.ವಿ ಭಟ್ರವರ ಸ್ಮರಣಾರ್ಥ ನಡೆದ ಮಾಡರ್ನ್ ಸೊಸೈಟಿ: ಚಾಲೆಂಜಸ್ ಅಂಡ್ ಪ್ರಾಸ್ಪೆಕ್ಟ್ಸ್ ಎಂಬ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಒಬ್ಬ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುವುದು ಆತನ ಅನುಭವಗಳ ಮೂಲಕ. ಮಕ್ಕಳ ವ್ಯಕ್ತಿತ್ವ ಮನೆಯ ವಾತಾವರಣದ ಆಧಾರದ ಮೇಲೆ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ಉತ್ತಮ ಪರಿಸರವನ್ನು ಮನೆಯಿಂದಲೇ ನಿರ್ಮಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಒಂದು ಭಾಗ. ಈ ಎಲ್ಲಾ ಭಾಗಗಳೂ ಸೇರಿ ಸಮಾಜ. ಹೀಗೆ ರೂಪುಗೊಢ ಸಮಾಜ ಪ್ರತಿಯೊಂದು ಭಾಗವನ್ನೂ ರಕ್ಷಿಸಿಕೊಳ್ಳುತ್ತದೆ ಎಂದು ನುಡಿದರು.
ಇಂದು ಭಾರತೀಯ ಸಮಾಜ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಮುದಾಯಾತ್ಮಕವಾಗಿ ಅಣೇಕಾನೇಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದೇ ಈ ಎಲ್ಲಾ ಸವಾಲುಗಳಿಗೆ ಉತ್ತರವೆನಿಸೀತು. ಸಮಾಜಶಾಸ್ತ್ರ ಸಮಾಜದ ಕುರಿತಾದ ಕಾಳಜಿಯನ್ನು ಹೊಂದಿರುವ ವಿಷಯ. ಈ ಅಧ್ಯಯನದಲ್ಲಿ ತೊಡಗುವ ಮಂದಿ ಸುತ್ತಲಿನ ಸಮಾಜದ ಬಗೆಗೆ ಅಧ್ಯಯನ ನಡೆಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ಸಮಾಜಶಾಸ್ತ್ರ ಕುರಿತಾದ ವಿಚಾರ ಸಂಕಿರಣಗಳು ಸಮಾಜಶಾಸ್ತ್ರ ಓದಿದವರ ಭವಿಷ್ಯದ ಉದ್ಯೋಗಗಳ ಬಗೆಗೂ ಮಾರ್ಗದರ್ಶನ ನೀಡುವಂತಾಗಬೇಕು. ಮನೆ, ಸಮಾಜ, ದೇಶ ಸರಿಯಾದ ಹಾದಿಯಲ್ಲಿ ಮುನ್ನಡೆಯುವ ಹಿನ್ನಲೆಯಲ್ಲಿ ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಒಂದು ಕಾಲದಲ್ಲಿ ನಮ್ಮ ದೇಶ ಉತ್ಕೃಷ್ಟ ಸ್ಥಿತಿಯಲ್ಲಿದ್ದದ್ದು ನಮಗೆಲ್ಲ ತಿಳಿದಿದೆ. ಆದರೆ ಕಾಲಾನಂತರದಲ್ಲಿ ದೇಶ ಅಧಃಪತನದತ್ತ ಸಾಗಿದ್ದೂ ಗೊತ್ತಿರುವ ಸತ್ಯ. ಮತ್ತೊಮ್ಮೆ ದೇಶವನ್ನು ಸುಸ್ಥಿತಿಯತ್ತ ಒಯ್ಯುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ. ಸಮಾಜಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯೂ ಅಗತ್ಯ ಎಂದು ಹೇಳಿದರು.
ಮಂಗಳೂರು ವಿವಿ.ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ವಿನಯ್ ರಜತ್ ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ರಕ್ಷಿತಾ ಕುಮಾರಿ ಹಾಗೂ ಪ್ರಜ್ಞಾ ಬಾರ್ಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಜೀವನ್ ದಾಸ್ ಎ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.