ಯು.ಜಿ.ಸಿ.ಯಿಂದ ಅತ್ಯುನ್ನತ ಮನ್ನಣೆ – ಕಾಲೇಜ್ ವಿದ್ ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ಗೆ ವಿವೇಕಾನಂದ ಆಯ್ಕೆ
ಪುತ್ತೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟವನ್ನಾಧರಿಸಿ ನ್ಯಾಕ್ ಸಂಸ್ಥೆಯಿಂದ ಎ ಶ್ರೇಣಿ ಮಾನ್ಯತೆ ಪಡೆದಿರುವ ಇಲ್ಲಿನ ವಿವೇಕಾನಂದ ಪದವಿ ಕಾಲೇಜು ನವದೆಹಲಿಯ ’ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ’ (ಯು.ಜಿ.ಸಿ)ವು ನೀಡುವ ಕಾಲೇಜ್ ವಿದ್ ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ (ಉತ್ಕೃಷ್ಟ ಸಾಮರ್ಥ್ಯವಿರುವ ಕಾಲೇಜು) ಎಂಬ ಮನ್ನಣೆಗೆ ಪಾತ್ರವಾಗಿದೆ. ಇದರಿಂದಾಗಿ ಬೋಧನೆ, ಕಲಿಕೆ, ಮೌಲ್ಯಮಾಪನದಲ್ಲಿ ಹೊಸತನದ ಅಳವಡಿಕೆ, ನೀರು ಹಾಗೂ ಇನ್ನಿತರ ಶಕ್ತಿಮೂಲಗಳ ಮಿತಬಳಕೆ, ಸಮುದಾಯ ಅಭಿವೃದ್ಧಿ ಕಾರ್ಯ, ಕ್ರೀಡೆ, ಆರೋಗ್ಯಕೇಂದ್ರ, ಮಳೆನೀರು ಕೊಯ್ಲು, ಸೋಲಾರ್ ಅಳವಡಿಕೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣವೇ ಮೊದಲಾದ ಅನೇಕ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಅನುಷ್ಠಾನಿಸಲು ಯು.ಜಿ.ಸಿ ಆರ್ಥಿಕ ಅನುದಾನ ನೀಡಲಿದೆ. ಈ ಮಾನ್ಯತೆಯು ಐದು ವರ್ಷಗಳ ಕಾಲ ಊರ್ಜಿತದಲ್ಲಿರುತ್ತದೆ.
ಭಾರತದಲ್ಲಿ ಈವರೆಗೆ ಕೇವಲ 306 ಕಾಲೇಜುಗಳು ಮಾತ್ರ ಇಂತಹ ಮನ್ನಣೆಗೆ ಪಾತ್ರವಾಗಿದ್ದು, ಪ್ರಸ್ತುತ ವರ್ಷ ಒಟ್ಟು 124 ಕಾಲೇಜುಗಳು ಆಯ್ಕೆಗೊಂಡಿವೆ. ಮಂಗಳೂರು ವಿವಿಯಲ್ಲಿ ಈ ಬಾರಿ ಆಯ್ಕೆಯಾದ ಕೇವಲ ನಾಲ್ಕು ಕಾಲೇಜುಗಳಲ್ಲಿ ವಿವೇಕಾನಂದ ಕಾಲೇಜೂ ಒಂದು ಎಂಬುದು ಗಮನಾರ್ಹ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.