ವಿವೇಕಾನಂದ ಕಾಲೇಜಿನಲ್ಲಿ ಯು.ಜಿ.ಸಿ. ಪ್ರಾಯೋಜಿತ ವಿಚಾರಗೋಷ್ಟಿ – ಎಸ್.ವಿ.ಪಿ ಸಾಹಿತ್ಯದಲ್ಲಿ ಬದುಕಿನ ಲಯ: ಡಾ.ವಿವೇಕ ರೈ
ಪುತ್ತೂರು: ಅಧ್ಯಾಪಕನಾಗಿ, ಸಾಹಿತಿಯಾಗಿ, ಸಾರ್ವಜನಿಕ ಭಾಷಣಕಾರನಾಗಿ, ಸಾಂಸಾರಿಕನಾಗಿ ವಿವಿಧ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕಿದವರು ಎಸ್.ವಿ.ಪರಮೇಶ್ವರ ಭಟ್ಟರು. ಅವರು ತಮ್ಮ ನೋವುಗಳನ್ನು ಮರೆಯುವುದಕ್ಕೆ ಸಾಹಿತ್ಯವನ್ನೇ ತಮ್ಮ ಅಡಗುದಾಣ ಮಾಡಿಕೊಂಡಿದ್ದರು ಎಂದು ಹಂಪಿ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗವು ಶನಿವಾರ ಕನ್ನಡ ಸಾಹಿತ್ಯಕ್ಕೆ ಎಸ್.ವಿ.ಪರಮೇಶ್ವರ ಭಟ್ ಅವರ ಕೊಡುಗೆ ಅನ್ನುವ ವಿಷಯವಾಗಿ ಆಯೋಜಿಸಿದ್ದ ಯು.ಜಿ.ಸಿ. ಪ್ರಾಯೋಜಿತ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಟಿಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ವಿ.ಪಿಯವರ ಗದ್ಯ, ಪದ್ಯ, ಸಾಹಿತ್ಯದಲ್ಲಿ ಮನುಷ್ಯ ಸಂಬಂಧದ ಭಾವಲೋಕ ವ್ಯಕ್ತವಾಗುತ್ತದೆ. ಆಧುನಿಕ ಬದುಕಿನಲ್ಲಿ ನಾವು ಬದುಕಿನ ಹಾಗೂ ಸಾಹಿತ್ಯದ ಲಯ ಕಾಣೆಯಾಗುತ್ತಿದೆ. ಅವರ ಸಾಹಿತ್ಯದ ವೈವಿಧ್ಯ, ಬದುಕಿನ ಕ್ರಮ ಪ್ರತಿಯೊಂದೂ ಮಾದರಿ. ಹಾಗಾಗಿ ಅಂತಹ ಹಿರಿಯರ ಆದರ್ಶಗಳನ್ನು ಬದುಕಿನಲ್ಲಿ ಆವಾಹಿಸಿಕೊಳ್ಳಬೇಕು. ಎಸ್.ವಿ.ಪಿ ಯವರು ಸಾಹಿತ್ಯವೊಂದೇ ಸಂಜೀವಿನಿ ಎಂದು ನಂಬಿ ಬದುಕಿದವರು. ಮಹತ್ತರವಾದ ವೈಶಾಲ್ಯವನ್ನು ಹೊಂದಿದ್ದ ಅವರೊಬ್ಬ ವಿಶ್ವಮಾನವ ಎಂದು ಅಭಿಪ್ರಾಯಪಟ್ಟರು.
ಇಂಗ್ಲಿಷ್ನ ಪ್ರಬಂಧಗಳನ್ನೂ ಕನ್ನಡಕ್ಕೆ ಅನುವಾದಿಸಿದವರು ಎಸ್.ವಿ.ಪಿ. ಪ್ರಬಂಧ ಬರವಣಿಗೆಗೆ ಅವರ ಪ್ರಬಂಧಗಳು ಮೇಲ್ಪಂಕ್ತಿ ಹಾಕಿಕೊಟ್ಟಿವೆ. ಅವರ ಕೃತಿಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ವಿಭಿನ್ನವಾಗಿ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯ. ಇಂದು ಕೇವಲ ಗುರಿ ಮಾತ್ರವಲ್ಲದೆ ದಾರಿಯನ್ನೂ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ಈ ಹಿನ್ನಲೆಯಲ್ಲಿಯೂ ಹಿರಿಯ ಸಾಹಿತಿಗಳ ಸಾಹಿತ್ಯದ ಅಧ್ಯಯನ ಅಗತ್ಯ ಎಂದು ನುಡಿದರು.
ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಆಶಯ ಭಾಷಣ ಮಾಡಿ ನೋವುಂಡು ನಗೆ ಚೆಲ್ಲಿದ ಅಜಾತಶತ್ರು ಎಸ್.ವಿ.ಪರಮೇಶ್ವರ ಭಟ್ಟರು. ತಮ್ಮ ಕೃತಿಯ ಮೌಲ್ಯದಷ್ಟೇ ದೊಡ್ಡ ವ್ಯಕ್ತಿತ್ವವನ್ನು ಹೊಂದಿದವರು. ಒಂದು ಆಯುಷ್ಯದಲ್ಲಿ ಸಾಮಾನ್ಯರಿಗೆ ಸಾಧ್ಯವಾಗದಷ್ಟು ಅಗಾಧ ಸಾಹಿತ್ಯವನ್ನು ಸೃಷ್ಟಿಸಿ, ಸಾಹಿತ್ತಿಕ ಲೋಕಕ್ಕೆ ವಿದ್ವತ್ತನ್ನು ತೆರೆದಿಟ್ಟವರು. ಅವರ ವ್ಯಕ್ತಿತ್ವದ ಬಗೆಗೆ ಮಾತನಾಡಲು ಹೊರಟರೆ ದಿನ ಸಾಲದು ಎಂದರು.
ಎಸ್.ವಿ.ಪಿಯವರು ಕಡುಬಡತನದಲ್ಲೇ ಬದುಕಿದವರು. ಅವರ ಜೀವನಾನುಭವ ಅಮೋಘವಾದದ್ದು. ತಮ್ಮ ಅನುಭವವನ್ನೇ ಸಾಹಿತ್ಯಕ್ಕಿಳಿಸಿದ ಮಹಾನ್ ವ್ಯಕ್ತಿ ಅವರು. ಸಂಸ್ಕೃತದ ಛಂದಸ್ಸನ್ನು ಕನ್ನಡದ ಛಂದಸ್ಸಿಗೆ ಅನುವಾದಿಸಿದ ಯೋಗ್ಯತಾವಂತ ಅವರು. ಸಮತೋಲನ, ಸಮಚಿತ್ತವನ್ನು ಕಾಯ್ದುಕೊಂಡವರು. ಅವರ ಭೌದ್ಧಿಕ ಪರಿಣತಿಯನ್ನು ಮುಂದಿನ ತಲೆಮಾರಿಗೆ ಒಯ್ಯುವ ಜವಾಬ್ಧಾರಿ ಎಲ್ಲರ ಮೇಲಿದೆ. ಹಿಂದಿನ ಕಾಲಘಟ್ಟದಲ್ಲಾದ ಸಾಹಿತ್ತಿಕ ಸಂಪತ್ತು ಮುಂದಿನ ಕಾಲಕ್ಕೂ ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಜಯರಾಮ ಭಟ್ ಎಂ.ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆ.೨೨ರಂದು ನಿಧನರಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯವರ ಆತ್ಮಕ್ಕೆ ಸದ್ಗತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾಲೇಜಿನ ವಿದ್ಯಾರ್ಥಿನಿಯರಾದ ಸ್ಮಿತಾ ಮಾಧವಿ ಹಾಗೂ ಸುಕನ್ಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ವಂದಿಸಿದರು. ಕನ್ನಡ ಉಪನ್ಯಾಸಕಿ ಗೀತಾ ಕುಮಾರಿ ಟಿ ಕಾರ್ಯಕ್ರಮ ನಿರ್ವಹಿಸಿದರು.