ವರ್ಣನಾತೀತವಾದ ಅಂಶವೇ ದೇವರು: ಶ್ರೀಕೃಷ್ಣ ಉಪಾಧ್ಯಾಯ
ಪುತ್ತೂರು: ಭಾರತವು ವಿಷ್ಣು ಸಹಸ್ರನಾಮ ಉದ್ಭವವಾದ ಪುಣ್ಯಭೂಮಿ. ವಿಷ್ಣು ಸಹಸ್ರನಾಮಕ್ಕೆ ಅದರದ್ದೇ ಆದ ಪೌರಾಣಿಕ ಮಹತ್ವವಿದೆ. ಇದು ಸಂಸ್ಕೃತ ಸಾರಸ್ವತ ಜಗತ್ತಿನಲ್ಲಿ ಭಗವಂತನ ಬಗ್ಗೆ ರಚಿತವಾದುದು. ಮಾತ್ರವಲ್ಲದೇ ಭಗವಂತನ ಸಾಕ್ಷಾತ್ಕಾರಕ್ಕೆ ವಿಷ್ಣು ಸಹಸ್ರನಾಮದ ಪಠಣವು ಸಹಾಯಕ ಎಂದು ಸಂಸ್ಕಾರ ಭಾರತಿಯ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮತ್ತು ವಿಕಾಸಂ ಸಂಸ್ಕೃತ ಸಂಘದ ಆಶ್ರಯದಲ್ಲಿ ವಿಷ್ಣು ಸಹಸ್ರನಾಮ ಜಪಯಜ್ಞ ಸಮಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಶಾಸ್ತ್ರ ಬದ್ಧ ಆಚರಣೆಯ ಅಗತ್ಯವಿದೆ. ಭಾರತೀಯ ಸಂಸ್ಕೃತಿಯ ಆಚರಣೆಗಳ ವಿವರಣೆ ಶಾಸ್ತ್ರದಲ್ಲಿದೆ. ಋಷಿಗಳು ತಾವು ಗಳಿಸಿದ ಪುಣ್ಯವನ್ನು ಸಮಾಜಕ್ಕೆ ಹಂಚಲು ಶಾಸ್ತ್ರಗಳನ್ನು ರಚಿಸಿದರು. ಅಲ್ಲದೇ ಭಗವಂತನ ನೈಜತೆ ವಿಶ್ವರೂಪವೇ ಆಗಿದೆ. ಎಲ್ಲರ ದೃಷ್ಟಿಕೋನದಂತೆ ಅನೇಕ ಹೆಸರುಗಳಿಂದ ಭಗವಂತನನ್ನು ಆರಾಧಿಸಬಹುದು. ಇಡೀ ವಿಶ್ವವೇ ಭಗವಂತ. ಯಾವ ಉದ್ದೇಶದಿಂದ ಆರಾಧಿಸುತ್ತಾರೋ ಆ ಉದ್ದೇಶವೇ ವಿಷ್ಣು ಎಂದು ನುಡಿದರು.
ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ಹೆಚ್ಚಿಸಬೇಕು. ಸಂಸ್ಕೃತಿಯ ವಿಚಾರಗಳ ಅಧ್ಯಯನದಿಂದ ನೈತಿಕತೆ ವ್ಯಕ್ತಿತ್ವವನ್ನು ಪಡೆಯಬಹುದು. ಆದರೆ ಮುಖ್ಯವಾಗಿ ತಿಳಿಯುವ ಹಂಬಲವಿರಬೇಕು. ಆಗ ಮಾತ್ರ ವಿಚಾರಗಳ ವಿವರಣೆ ಸಾಧ್ಯ. ವಿವರಣೆಗೆ ದೊರಕದ್ದು ತಿಳಿಯಲು ಕಷ್ಟ ಸಾಧ್ಯವಾದುದು ಭಗವಂತ. ಕಠಿಣ ಪರಿಶ್ರಮದಿಂದ ಭಗವಂತನ ದರ್ಶನ ದೊರಕುವುದು. ವ್ಯಾಪ್ತಿಗೆ ಅತೀತವಾದವನೇ ವಿಷ್ಣು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್‍ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಭಗವಂತನ ವಿಶ್ವರೂಪವು ಅಗಾಧವಾದುದು. ವಿಷ್ಣು ಭಗವಂತನ ರೂಪ. ವಿಷ್ಣುವಿನ ಆರಾಧನೆಯ ಅಗತ್ಯವಿದೆ. ಇದರಿಂದ ಮನದ ವಿಕೃತಿಯನ್ನು ಹೋಗಲಾಡಿಸಬಹುದು. ಮಾತ್ರವಲ್ಲದೇ ವಿಷ್ಣು ಸಹಸ್ರನಾಮದ ಪಠಣವು ಕೇವಲ ವೈಯಕ್ತಿಕ ಅಭಿವೃದ್ಧಿಯಲ್ಲದೇ ಸಮಾಜದ ಏಳಿಗೆಗೂ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ವಿಕಾಸಂನ ಸಂಯೋಜಕ ಡಾ.ಶ್ರೀಶಕುಮಾರ.ಯಂ.ಕೆ ಸ್ವಾಗತಿಸಿ, ಪ್ರಸ್ತಾವಿಸಿದರು. ವಿಕಾಸಂ ನ ಅಧ್ಯಕ್ಷ ಜ್ಯೇಷ್ಠರಾಜ ಮತ್ತು ಕಾರ್ಯದರ್ಶಿ ಅನನ್ಯಲಕ್ಷ್ಮೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕ್ಷಮಾದೇವಿ ವಂದಿಸಿದರು, ಸುಶ್ಮಿತಾ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಸುಶ್ಮಿತಾ ಕ್ಷಮಾ ಪ್ರಾರ್ಥಿಸಿದರು.