ದೇವೀರಮ್ಮನಿಗೆ ಅಧ್ಯಾಪಕ ಸಂಘದಿಂದ ಬೀಳ್ಕೊಡುಗೆ – ಸಂದರ್ಭಕ್ಕೆ ಹೊಂದಿಕೊಳ್ಳುವ ಗುಣ ಬೇಕು: ಡಾ.ಪಿ.ಡಬ್ಲ್ಯು. ಪ್ರಭಾಕರ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಿಕೆ ದೇವೀರಮ್ಮ ಜೂನ್ ೩೦ಕ್ಕೆ ನಿವೃತ್ತರಾಗುತ್ತಿರುವ ಹಿನ್ನಲೆಯಲ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಾಪಕರ ಸಂಘದಿಂದ ಬುಧವಾರ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಮಯ, ಅಧಿಕಾರ, ಹಣ ಇವುಗಳು ಮನುಷ್ಯ ದೇಹವನ್ನು ಜೀವನಕ್ಕೆ ಒಗ್ಗಿಕೊಳ್ಳದಂತೆ ಮಾಡಬಹುದು. ಸಂದರ್ಭಕ್ಕೆ ಹೊಂದಿಕೊಂಡು ಹೋಗುವ ಗುಣ, ಮನಸ್ಸು ಎಲ್ಲರಿಗೂ ಇರುವುದಿಲ್ಲ. ನಮ್ಮೊಳಗೆ ಏನೇ ಭಾವನೆಗಳಿದ್ದರೂ ಜೀವನದಲ್ಲಿ ಕೆಲವು ನೀತಿ ನಿಯಮಗಳಿಗೆ ಬದ್ಧರಾಗಿರಲೇ ಬೇಕಾಗುತ್ತದೆ. ದೇವೀರಮ್ಮ ಈ ಎಲ್ಲವನ್ನೂ ಪಾಲಿಸಿಕೊಂಡು ಬಂದಂತಹವರು ಎಂದರು.
ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಮಾತನಾಡಿ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ದೇವೀರಮ್ಮ, ನಿಯೋಜನೆಯ ಮೇರೆಗೆ ವಿವೇಕಾನಂದ ಕಾಲೇಜಿನಲ್ಲಿ ೨೦೧೦ ರಿಂದ ಕಾರ್ಯನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳ ಅಚ್ಚು–ಮೆಚ್ಚಿನ ಅಧ್ಯಾಪಿಕೆಯಾಗಿದ್ದ ಈಕೆ, ಸಹೋದ್ಯೋಗಿಗಳೊಡನೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರ ಸಂಘದ ಅಧ್ಯಕ್ಷ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಕಾರಂತ, ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಶುಭ ಹಾರೈಸಿದರು. ದೇವೀರಮ್ಮ ತಮ್ಮ ಉದ್ಯೋಗಾವಧಿಯ ರಸನಿಮಿಷಗಳನ್ನು ಪ್ರಸ್ತುತಪಡಿಸಿದರು.
ಸಂಘದ ಕಾರ್ಯದರ್ಶಿ ರಾಜ್ಯಶಾಸ್ತ್ರ ಉಪನ್ಯಾಸಕಿ ಅನಿತಾ ಕಾಮತ್ ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ರವಿಕಲಾ ವಂದಿಸಿದರು. ಗಣಕ ಶಾಸ್ತ್ರ ಉಪನ್ಯಾಸಕಿ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.