ವಿವೇಕಾನಂದದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ: ಹೈನುಗಾರಿಕೆಯನ್ನು ಕೀಳಾಗಿ ಕಾಣಬೇಡಿ : ಸೀತಾರಾಮ ರೈ
ಪುತ್ತೂರು: ಹಾಲು ಉತ್ಪಾದನೆಯನ್ನು ಹೆಚ್ಚಿಸುವತ್ತ ಸಹಕಾರ ಸಂಘ ಸಕಾರಾತ್ಮಕವಾದ ನಡೆಯಿಟ್ಟಿದೆ. ರಾಜ್ಯ ಸರಕಾರ ಕ್ಷೀರಕ್ರಾಂತಿಗೋಸ್ಕರ ಬಹಳಷ್ಟು ಉತ್ತೇಜನ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ದಕ್ಷಿಣಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ದ.ಕ ಹಾಲು ಉತ್ತಾದಕರ ಸಹಕಾರ ಸಂಘದ ನಿರ್ದೇಶಕ ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸಂಚಾಲಕ ಸೀತಾರಾಮ ರೈ ಸವಣೂರು ಹೇಳಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ, ವಿವೇಕಾನಂದ ಸಂಶೋದನಾ ಕೇಂದ್ರ ಮತ್ತು ದ.ಕ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಇದರ ಸಹಯೋಗದೊಂದಿಗೆ ನಡೆದ ’ಹಾಲು ಉತ್ಪಾದನೆ, ವಿಚಾರ ಮತ್ತು ಅವಕಾಶಗಳು’ ಎಂಬ ವಿಷಯದ ಬಗೆಗಿನ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸಮಾರೋಪ ಭಾಷಣ ಮಾಡಿದರು.
ಹೈನುಗಾರಿಕೆ ಕೃಷಿ ಏಳಿಗೆಗೆ ಮಾತ್ರ ಎಂಬ ಮಾತಿತ್ತು ಆದರೆ ಇಂದು ಹೈನುಗಾರಿಕೆಯು ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಇಂದು ಕ್ಷೀರ ಉತ್ಪಾದನೆಗೆ ಸಾಕಷ್ಟು ಪ್ರೋತ್ಸಾಹ ಲಭಿಸುತ್ತಿದೆ. ಒಕ್ಕೂಟ ಉತ್ಪಾದಕರ ಬೇಡಿಕೆಗಳನ್ನು ಪೂರೈಸುತ್ತಿದೆ ಮತ್ತು ಆಧಿಕ ಹಾಲನ್ನು ಉತ್ಪಾದಕರಿಂದ ತೆಗೆದುಕೊಳ್ಳಲು ಸಿದ್ದವಿದೆ. ಹೈನುಗಾರಿಕೆಯನ್ನು ಕೀಳಾಗಿ ಕಾಣುವ ದೃಷ್ಟಿಕೋನ ಸರಿಯಲ್ಲ. ಹೈನುಗಾರಿಕೆ ಸುಸ್ಥಿರ ಆದಾಯವನ್ನು ತಂದುಕೊಡುವ ಕ್ಷೇತ್ರ ಎಂದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಜಯರಾಮ್ ಭಟ್ ಎಂ ಟಿ. ಮಾತನಾಡಿ, ಇಂದು ಯುವ ಜನಾಂಗ ಹೈನುಗಾರಿಕೆಯನ್ನು ಕೀಳು ಉದ್ಯಮವಾಗಿ ನೋಡುತ್ತಿದ್ದಾರೆ. ಜೀವನ ಶೈಲಿಯನ್ನು ಬದಲಿಸುತ್ತಾ ನಗರದ ಜೀವನಕ್ರಮಕ್ಕೆ ಬದಲಾಗುತ್ತಿದ್ದಾರೆ. ತಮ್ಮ ಕುಟುಂಬ ಮೂಲ ಆದಾಯವಾಗಿದ್ದ ಹೈನುಗಾರಿಕೆ ಮತ್ತುಕೃಷಿಯನ್ನು ಇಂದಿನ ಯುವಸಮುದಾಯ ಮರೆತಿದ್ದಾರೆ. ಆದರೆ ಹೈನುಗಾರಿಕೆಯನ್ನು ಸ್ವ-ಉದ್ಯೋಗವನ್ನಾಗಿ ರೂಡಿಸಿಕೊಂದು ಅದರಲ್ಲಿ ಲಾಭಗಳಿಸಿ ಕೊಂಡವರು ಆನೇಕರಿದ್ದಾರೆ. ಯುವ ಸಮುದಾಯ ಹೈನುಗಾರಿಕೆಯನ್ನು ಉಪಕಸುಬನ್ನಾಗಿಯೂ ರೂಡಿಸಿಕೊಳ್ಳಬಹುದು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಹೈನುಗಾರಿಕೆ ಮತ್ತು ಕೃಷಿ ಒಂದಕ್ಕೊಂದು ಪೂರಕವಾದ ಕ್ಷೇತ್ರಗಳು. ಇಂದು ಪ್ರತಿಯೊಬ್ಬರಿಗೂ ಸರಕಾರಿ ಉದ್ಯೋಗ ಸಿಗುವುದು ಕಷ್ಟ. ಈ ನಿಟ್ಟಿನಲ್ಲಿ ಯುವಜನಾಂಗ ಹೈನುಗಾರಿಕೆಯನ್ನು ಔದ್ಯೋಗಿಕ ಕ್ಷೇತ್ರವನ್ನಾಗಿ ಸ್ವೀಕರಿಸಬಹುದು. ಈ ಕ್ಷೇತ್ರ ವೈಯಕ್ತಿಕವಾಗಿಯೂ ಸಂತಸ ನೀಡಬಲ್ಲ ಕ್ಷೇತ್ರವಾಗಿದೆ. ಯೋಗ್ಯವಾದ ಮತ್ತು ಸ್ಥಿರವಾದ ನೆಲಗಟ್ಟಿನಲ್ಲಿ ಆರಂಭ ಮಾಡಿದಾಗ ಉದ್ಯಮ ಸುಸೂತ್ರವಾಗಿ ನಡೆಯಬಲ್ಲದು ಎಂದರು.
ಕಾರ್‍ಯಕ್ರಮ ಅದ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರದ ನಿರ್ದೇಶಕ ಕೆ. ಕೃಷ್ಣ ಭಟ್ ಮಾತನಾಡಿ, ಹೈನುಗಾರಿಕೆಯನ್ನು ಉತ್ಸಾಹದಿಂದ ಆರಂಭಿಸಬೇಕು. ಈ ಕ್ಷೇತ್ರದಲ್ಲಿ ಕಷ್ಟಪಟ್ಟು ತೊಡಗಿಸಿಕೊಂಡರೆ ಲಾಭ ಖಚಿತ. ಪ್ರಸ್ತುತ ಸಮಾಜದಲ್ಲಿ ಸ್ವಾವಲಂಭಿಯಾಗುವ ಅಗತ್ಯತೆ ಇದೆ. ಯುವಸಮುದಾಯ ಈ ಕ್ಷೇತ್ರದ ಕಡೆ ಒಲವು ಹೊಂದಬೇಕು. ವಿದ್ಯಾವಂತರು ಈ ಕ್ಷೇತ್ರಕ್ಕೆ ಕಾಲಿಟ್ಟರೆ ಆಧುನಿಕತೆಯೊಂದಿಗೆ ಹಾಲು ಉತ್ಪಾದಿಸಬಹುದು. ಹೈನುಗಾರಿಕೆ ಪ್ರತಿಯೊಬ್ಬರಿಗೂ ತೆರೆದ ಬಾಗಿಲು. ಸಾಧಿಸುವ ಅವಕಾಶಗಳು ಎಲ್ಲರಿಗೂ ಮುಕ್ತವಾಗಿದೆ. ಭಾರತದಲ್ಲಿ ಹೈನುಗಾರಿಕೆ ಸಂಸ್ಕೃತಿಯ ದ್ಯೋತಕವಾಗಿದೆ. ಹಳ್ಳಿ ಮತ್ತು ಹೈನುಕಾರಿತೆ ಭಾರತೀಯತೆಯ ಪ್ರತೀಕ. ಭಾರತದ ಉಳಿವಿಗೆ ದೇಶದಲ್ಲಿ ಹೈನುಗಾರಿಕೆ ಮತು ಕೃಷಿಯ ಪಾಲು ಹೇರಳವಾಗಿದೆ ಎಂದು ನುಡಿದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಅರುಣ್ ಪ್ರಕಾಶ್ ಸ್ವಾಗತಿಸಿದರು. ವಿಭಾಗ ಮುಖ್ಯಸ್ಥಡಾ. ವಿ.ವಿಘ್ನೇಶ್ವರ ವರ್ಮುಡಿ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ವಿ. ನಿರ್ವಹಿಸಿದರು.