ಸವಾಲಿಗೆ ಎದೆಯೊಡ್ಡಿ ಸಾಧನೆ ಮೆರೆಯಬೇಕು : ಎಸ್.ಆರ್.ಸತೀಶ್ಚಂದ್ರ
ಪುತ್ತೂರು: ಸಹಕಾರ ಕ್ಷೇತ್ರ ಇಂದು ಅನೇಕಾನೇಕ ಸಂಗತಿಗಳಿಗೆ ಪ್ರೋತ್ಸಾಹ ನೀಡಿದೆ. ಇದು ಬ್ರಿಟಿಷರು ಕೊಟ್ಟ ಕೊಡುಗೆಯಲ್ಲ. ಸಹಸ್ರಾರು ವರ್ಷಗಳ ಶ್ರೇಷ್ಟ ಪರಂಪರೆಯ ಪ್ರತೀಕವಾಗಿ ಸಹಕಾರ ಕ್ಷೇತ್ರ ಬೆಳೆದು ಬಂದಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾದ ರೈತರ ಆತ್ಮಹತ್ಯೆ – ಕಾರಣಗಳು ಮತ್ತು ಪರಿಹಾರಗಳು ಎಂಬ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.
ಒಂದು ಕಾಲದಲ್ಲಿ ಭಾರತದ ಹಾಲೆಂದರೆ ಘಟಾರದ ನೀರಿನ ಹಾಗೆ ಎಂದು ವಿದೇಶೀಯರು ಹಂಗಿಸಿದಾಗ ಅದನ್ನೇ ಸವಾಲಾಗಿ ಸ್ವೀಕರಿಸಿ ಇಂದು ಭಾರತ ಹಾಲಿನ ಉತ್ಪಾದನೆಯಲ್ಲಿ ನಂ.೧ ರಾಷ್ಟ್ರವಾಗಿದೆ. ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ಭಾರತ ಇಂದು ಮುಂಚೂಣಿಯಲ್ಲಿದೆ. ಸವಾಲಿಗೆ ಎದೆಯೊಡ್ಡಿ ಸಾಧನೆ ಮಾಡಿದ ಅನೇಕರು ನಮ್ಮ ಮಣ್ಣಿನಲ್ಲಿ ಮೂಡಿ ಬಂದಿದ್ದಾರೆ. ಹೀಗಿರುವಾಗ ಆತ್ಮಹತ್ಯೆ ನಮ್ಮ ಆದ್ಯತೆಯಾಗಬಾರದು ಎಂದು ಕರೆ ನೀಡಿದರು.
ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಆ ವೇಗಕ್ಕೆ ನಾವೂ ನಮ್ಮನ್ನು ಸೇರಿಸಿಕೊಳ್ಳಬೇಕು. ಕೃಷಿಕರು ನಂಬಿಕೆ ಬೆಳೆಸಿಕೊಳ್ಳಬೇಕು. ಕೃಷಿಕರೊಂದಿಗೆ ಸಹಕಾರಿ ಕ್ಷೇತ್ರ ಸದಾ ಇದೆ. ಕೃಷಿಕರು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್, ಐಎಎಸ್ ಮಾತನಾಡಿ, ರೈತರು ಏಕ ಬೆಳೆಗೆ ಹೊಂದಿಕೊಳ್ಳದೆ ಹೊಸ ಸಾಧ್ಯತೆಯ ಬಗೆಗೆ ಚಿಂತಿಸಬೇಕು. ಕೃಷಿಕನ ಉದ್ಯೋಗದ ಹಿನ್ನಲೆಯಲ್ಲಿ ಉಂಟಾಗುವ ಆರೋಗ್ಯ ವ್ಯತ್ಯಯದ ಬಗೆಗೆ ಪ್ರತಿಯೊಬ್ಬರೂ ಆಲೋಚಿಸಬೇಕು. ಜತೆಗೆ ರೈತನಿಗೆ ತನ್ನ ಕೃಷಿ ಭೂಮಿಯನ್ನು ಯಾರಿಗೆ ಬೇಕಾದರೂ ಮಾರಾಟ ಮಾಡಲು ಅನುಕೂಲವಾಗುವ ಕಾನೂನಿನ ಅಗತ್ಯವಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಕ್ಯಾಂಪ್ಕೋ ಅಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಆರ್.ಸತೀಶ್ಚಂದ್ರ ಅವರನ್ನು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೃಷಿಕ ನಾರಾಯಣ ಭಟ್ ಉಪಸ್ಥಿತರಿದ್ದರು. ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕರಲ್ಲೊಬ್ಬರಾದ ಡಾ.ಎಂ.ಜಿ.ಭಟ್ ಸ್ವಾಘತಿಸಿದರು. ಮತ್ತೋರ್ವ ನಿರ್ದೇಶಕ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.