ವಿವೇಕಾನಂದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ
ಪುತ್ತೂರು: ಸಂಸ್ಕಾರಯುತ ಸಂಗತಿಗಳ ಕುರಿತಾಗಿ ಗಮನ ಹರಿಸದಿದ್ದರೆ ವಿಕೃತಿಗಳು ಘಟಿಸುತ್ತಾ ಹೋಗುತ್ತವೆ. ಪ್ರಜಾತಂತ್ರ ವ್ಯವಸ್ಥೆಗೆ ಇದು ಮಾರಕ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಹಾಗೂ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದರು.
ಅವರು ಭಾನುವಾರ ಇಲ್ಲಿನ ವಿವೇಕಾನಂದ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಸಮಾರೋಪ ಹಾಗೂ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮರ್ಥ ನಾಯಕತ್ವ ಇದ್ದಾಗ ಮಾತ್ರ ದೇಶ ಮುನ್ನಡೆಯನ್ನು ಕಾಣಲು ಸಾಧ್ಯ. ಉತ್ತಮ ಉದಾತ್ತ ಚಿಂತನೆಗಳುಳ್ಳ ವ್ಯಕ್ತಿ ನಾಯಕನಾಗಬೇಕು. ಅದಿಲ್ಲವಾದರೆ ದೇಶ ಅಧಃಪತನದೆಡೆಗೆ ಸಾಗುತ್ತದೆ. ಇಂದು ಆ ಮಾತು ಮತ್ತೊಮ್ಮೆ ನಿಜವಾಗುತ್ತಿದೆ. ಉತ್ತಮ ನಾಯಕತ್ವ ದೊರಕಿದೆ. ವಿವೇಕಾನಂದರು ಹೇಳಿದಂತೆ ಸಹೋದರತೆಯ ಬಾಂಧವ್ಯ ಮತ್ತಷ್ಟು ಬೆಳೆಯಬೇಕಿದೆ. ಪ್ರೀತಿ ವಿಶ್ವಾಸಗಳೇ ಕಾನೂನಾಗಿ ಹೊರಬರಬೇಕಿದೆ. ಸಹಮತದ ವ್ಯವಸ್ಥೆ ಸಮಾಜದಲ್ಲಿರಬೇಕು ಎಂದು ಹೇಳಿದರು.
ಪ್ರಕೃತಿಯಲ್ಲಿ ಸಂಸ್ಕೃತಿ ಮತ್ತು ವಿಕೃತಿಗಳೆಂಬ ಎರಡು ಸಂಗತಿಗಳಿವೆ. ಒಬ್ಬ ವ್ಯಕ್ತಿ ತಾನು ಬೆಳೆಯುವಾಗ, ವಿವಿಧ ಸಂಗತಿಗಳಿಗೆ ಸ್ಪಂದಿಸುವಾಗ ಸಂಸ್ಕೃತಿಯೊಂದಿಗೆ ಒಡಗೂಡಿ ಮುನ್ನಡೆಯಬೇಕು. ಈ ಸಂಗತಿಯನ್ನು ಸ್ವಾಮಿ ವಿವೇಕಾನಂದರು ಈ ಹಿಂದೆಯೇ ಸಂದೇಶ ರೂಪದಲ್ಲಿ ನೀಡಿದ್ದಾರೆ. ಆದ್ದರಿಂದ ಅವರ ಆಶಯಗಳನ್ನು ಅಥೈಸಿಕೊಂಡು ಮುನ್ನಡೆಯಬೇಕು ಎಂದು ಕರೆನೀಡಿದರಲ್ಲದೆ ವಿವೇಕಾನಂದ ಮಹಾವಿದ್ಯಾಲಯ ಒಂದು ಸಾಂಸ್ಕೃತಿಕ ಕೇಂದ್ರವಾಗಿದೆ ಎಂದರು.
ಜಗತ್ತು ಬೆಳೆಯುತ್ತಿದೆ. ಯುವಕರು ಸವಾಲನ್ನೆದುರಿಸುವ ದಿನಗಳು ಬಂದಿವೆ. ಮಾನವ ಸಂಪನ್ಮೂಲದ ಕ್ರೋಢೀಕರಣ ಆಗಬೇಕಿದೆ. ಜಗದ ರಾಷ್ಟ್ರಗಳ ಜತೆ ಪೈಪೋಟಿ ನೀಡಿ ಬೆಳೆಯಬೇಕಿದೆ. ದೇಶದಲ್ಲಿ ಜನ ಸಂಖ್ಯೆ ಹೆಚ್ಚಿದರೆ ಅದು ಶಾಪವಲ್ಲ. ನಮ್ಮ ದೇಶ ಇದನ್ನು ವರವಾಗಿ ಪಡೆದು ಮುನ್ನಡೆಯಬೇಕು ಎಂದು ನುಡಿದರು.
ಸಮಾರೋಪ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶಿಕ್ಷಣ ಸಂಸ್ಥೆಗಳೆಂದರೆ ಸಮಾಜದೇವತೆಯ ಆಭರಣಗಳು. ಸಮಾಜ ಸುಂದರವಾಗಿ ಕಾಣಿಸಿಕೊಳ್ಳಬೇಕಾದರೆ ಈ ಆಭರಣಗಳು ಉತ್ತಮವಾಗಿರಬೇಕು. ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಶಿಕ್ಷಣದೊಂದಿಗೆ ಆಧುನಿಕ ವೈಜ್ಞಾನಿಕ ಸಂಗತಿಗಳಿಗೂ ಒತ್ತು ಕೊಟ್ಟವರು. ಅವರಿಗೆ ಬಹು ವಿಶಾಲವಾದ ದೂರದೃಷ್ಟಿ ಇತ್ತು ಎಂದು ಹೇಳಿದರು.
ಶಿಕ್ಷಣ ಸಂಸ್ಥೆ ಸಮಾಜಕ್ಕೆ ಬಹುದೊಡ್ಡ ಕೊಡುಗೆ. ವಿದ್ಯಾಲಯಗಳನ್ನು ಆರಂಭಿಸುವುದೆಂದರೆ ಪುಣ್ಯದ ಕೈಂಕರ್ಯ. ಎಲ್ಲಾ ಸಾಕ್ಷರರನ್ನೂ ಶಿಕ್ಷಿತರೆನ್ನಲು ಸಾಧ್ಯವಿಲ್ಲ. ಎಲ್ಲಾ ಶಿಕ್ಷಿತರನ್ನೂ ಜ್ಞಾನಿಗಳೆನ್ನಲೂ ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಣ ಯಾಕೆ? ಅದರ ಉದ್ದೇಶವೇನು ಎಂಬುದನ್ನು ಅರಿಯಬೇಕು. ಇಡೀ ಜಗತ್ತಿಗೆ ನಾಗರಿಕತೆಯನ್ನು ಬೋಧೀಸಿದ ನಮ್ಮ ದೇಶದಲ್ಲಿ ಉತ್ತಮ ಶಿಕ್ಷಣಕ್ಕಾಗಿ ಹೆಣಗಾಡುವ ಪರಿಸ್ಥಿತಿ ಬಂದಿರುವುದು ಶೋಭೆಯ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.
ನಾನು ಸಮಾಜದ ಋಣದಲ್ಲಿದ್ದೇನೆ ಎಂಬ ಪ್ರಜ್ಞೆಯನ್ನು ಶಿಕ್ಷಣ ಕಲಿಸಬೇಕು. ಇಂದು ಶಿಕ್ಷಣದ ಪ್ರಸರಣ ಹೆಚ್ಚಾಗಿದೆ. ಆದರೆ ಇದರೊಂದಿಗೆ ಅಪರಾಧಗಳೂ ಹೆಚ್ಚಿವೆ. ಜಗತ್ತು ಬೆಳೆದಂತೆ ಸ್ವಾರ್ಥವೂ ಬೆಳೆಯುತ್ತಿದೆ. ಸ್ವಂತ ವೈಭೋಗದ ಬಯಕೆಯೂ ವೃದ್ಧಿಸುತ್ತಿದೆ. ಆದ್ದರಿಂದ ತಾನು ಪಡೆದದ್ದಕ್ಕಿಂತ ಹೆಚ್ಚು ಕೊಡುವ ಗುಣವನ್ನು ವ್ಯಕ್ತಿಯಲ್ಲಿ ಅಡಕವಾಗಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ತನ್ನ ಕಾರ್ಯವನ್ನು ಒಬ್ಬಾತ ಉತ್ತಮವಾಗಿ ನಿರ್ವಹಿಸುವಂತೆ ಆತನನ್ನು ತಯಾರು ಮಾಡಬೇಕು ಎಂದು ನುಡಿದರು.
ವಿವೇಕಾನಂದ ಜಯಂತಿ ವಿಶೇಷ ಉಪನ್ಯಾಸ ನೀಡಿದ ಪಶ್ಚಿಮ ಬಂಗಾಳ ಬೇಲೂರು ಮಠ ರಾಮಕೃಷ್ಣ ಮಿಶನ್ ವಿವೇಕಾನಂದ ವಿರ್ಶವವಿದ್ಯಾನಿಲಯದ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದಜೀ ಮಾತನಾಡಿ, ಧರ್ಮ ವಿವಿಧ ತಡೆಗಳಲ್ಲಿ ವಿವಿಧ ಗುಂಪುಗಳೊಳಗೆ ಬಂಧಿತವಾಗುತ್ತಿದೆ. ಈ ಕಾರಣಕ್ಕಾಗಿಯೇ ಕೃಷ್ಣ, ಜೀಸಸ್, ಬುದ್ಧನಂತಹ ಅವತಾರಗಳು ಅನಿವಾರ್ಯವಾಗುತ್ತದೆ. ಆತ್ಮಶೋಧನೆ, ಪರಿಶುದ್ಧತೆ ನಮ್ಮ ಬದುಕಿನ ಅನಿವಾರ್ಯ ವಿಚಾರಗಳು ಎಂದರು.
ಸ್ವಾಮಿ ವಿವೇಕಾನಂದರು ಧಾರ್ಮಿಕತೆಯನ್ನೂ ವೈಜ್ಞಾನಿಕವಾಗಿಯೇ ಅರಿಯಬಹುದೆಂಬುದನ್ನು ಪಾಶ್ಚಾತ್ಯರಿಗೆ ತೋರಿಸಿಕೊಟ್ಟವರು. ಯಾರಿಗೆ ಧಾರ್ಮಿಕ ವೈಚಾರಿಕ ಚಿಂತನೆಗಳು ಅರಿವಿದೆಯೋ ಅಂತಹವರಿಗೆ ಧರ್ಮದ ಆಂತರಂಗಿಕ ವಿಚಾರಗಳನ್ನು ಶೊಧಿಸುವುದಕ್ಕೆ ಸಾಧ್ಯ ಎಂಬುದನ್ನು ವಿವರಿಸಿದರು. ಆಧುನಿಕ ಶಿಕ್ಷಣ ನಮ್ಮತನವನ್ನು, ನಮ್ಮವರನ್ನು ಮೂರ್ಖ ವಿಚಾರವಾಗಿ ಕಾಣುವಂತೆ ಮಾಡುತ್ತಿದೆ ಎಂಬುದನ್ನು ಶತಮಾನದ ಹಿಂದೆ ವಿವೇಕಾನಂದರು ಅರಿತಿದ್ದರು ಎಂದು ಹೇಳಿದರು.
ಯುವಜನತೆ ಇಂದು ಸ್ವಾತಂತ್ರ್ಯ ಬಯಸುತ್ತಿದೆ. ಆದರೆ ಈಗಾಗಲೇ ಬೇಕಾದಷ್ಟು ಸ್ವಾತಂತ್ರ್ಯ ಪ್ರಾಪ್ತವಾಗಿದೆ. ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕೆ, ಉದಾತ್ತ ವ್ಯಕ್ತಿಗಳಾಗುವುದಕ್ಕೆ, ಜ್ಞಾನ ಸಂಪಾದಿಸುವುದಕ್ಕೆ ಬೇಕಾದಷ್ಟು ಸ್ವಾತಂತ್ರ್ಯ ಸದಾ ಲಭಿಸುತ್ತಿದೆ. ಆದರೆ ಸಮಯ ಹಾಳು ಮಾಡುವ, ಬೇಕಾಬಿಟ್ಟಿ ಇರುವಂತಹ ಸ್ವಾತಂತ್ರ್ಯ ಮಾತ್ರ ದೊರಕುತ್ತಿಲ್ಲ ಅಷ್ಟೆ. ಆದರೆ ಅಂತಹ ಸ್ವಾತಂತ್ರ್ಯ ಇರಲೂಬಾರದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪರ್ಯಾಯ ಫಲಕಕ್ಕೆ ಭಾಜನವಾಯಿತು. ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ರಾಮ ಭಟ್, ಕಾರ್ಯಾಧ್ಯಕ್ಷ ವಿ.ವಿ.ಭಟ್, ಐಎಎಸ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಂಗಮೂರ್ತಿ ಎಸ್.ಆರ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್‌ದಾಸ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ನಿಶಾ, ಶ್ರೀದೇವಿ ಪಿ.ಆರ್, ಶೃತಿ ಕೆ, ರೂಪಾಶ್ರೀ, ಸುಕನ್ಯ, ಸ್ಮಿತ ಹಾಗೂ ಸುಜನಶ್ರೀ ಪ್ರಾರ್ಥಿಸಿದರು. ವಿದ್ಯಾರ್ಥಿ ಸುಹಾಸ್ ಎ.ಪಿ. ಆಶಯ ಗೀತೆ ಹಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಪ್ರಸ್ತಾವನೆಗೈದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ವಿ.ನಾರಾಯಣ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ಶ್ರೀಶ ಕುಮಾರ್ ಎಂ.ಕೆ, ಡಾ.ಮನಮೋಹನ್, ರೋಹಿಣಾಕ್ಷ, ಡಾ.ಉಮಾದೇವಿ ಹಾಗೂ ಡಾ.ನಿವೇದಿತಾ ಕಾರ್ಯಕ್ರಮ ನಿರ್ವಹಿಸಿದರು.