VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿದ್ಯಾರ್ಥಿಗಳು ದೇಶಸೇವೆಯ ಕನಸು ಕಾಣಬೇಕು: ಡಾ.ಮುರಳಿ ಮನೋಹರ ಜೋಶಿ – ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ

ಪುತ್ತೂರು: ೧೯೬೫ರಲ್ಲಿ ಸ್ಥಾಪನೆಯಾದ ಇಲ್ಲಿನ ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು.

       ಕಾರ್ಯಕ್ರಮವನ್ನು ಉದ್ಘಾಟಿಸಿದ ಲೋಕ ಸಭಾ ಸದಸ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾಜಿ ಕೇಂದ್ರ ಸಚಿವ ಡಾ.ಮುರಳಿ ಮನೋಹರ ಜೋಶಿ ಮಾತನಾಡಿ, ಇಂದಿನ ಸಕಲ ವ್ಯವಸ್ಥೆಗಳೂ ಜಾಗತೀಕರಣಕ್ಕೆ ಪೂರಕವಾಗಿವೆ. ಹಾಗಾಗಿಯೇ ಬಡವರಿಗೆ, ಜನಸಾಮಾನ್ಯರಿಗೆ ವ್ಯವಸ್ಥೆಗಳು ಸಹಕಾರಿಯಾಗುತ್ತಿಲ್ಲ. ಜಾಗತೀಕರಣ ಜಗತ್ತನ್ನೇ ಮಾರುಕಟ್ಟೆಯನ್ನಾಗಿಸಿದೆ. ಆದರೆ ಭಾರತೀಯರು ಭಾವನೆಗಳನ್ನು ಹಾಗೂ ಆಧ್ಯಾತ್ಮಕತೆಯನ್ನು ಗೌರವಿಸುವವರು. ನಮಗೆ ಮಾರುಕಟ್ಟೆ ಜೀವನದಲ್ಲಿ ನಂಬಿಕೆ ಇಲ್ಲ ಎಂದರು.

ಪ್ರಪಂಚದಾದ್ಯಂತ ಶಾಂತಿ, ಉತ್ತಮ ಆಡಳಿತ, ಪ್ರಜಾಪ್ರಭುತ್ವ, ಬಡತನ ನಿರ್ಮೂಲನೆಯ ಬಗೆಗೆ ಪದೇ ಪದೇ ಮಾತನಾಡುತ್ತಾರೆ. ಆದರೆ ಇವ್ಯಾವುವೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಮತ್ತೆ ಮತ್ತೆ ಯುದ್ಧಗಳು ಸಂಭವಿಸುತ್ತಿವೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಬುದ್ಧಿವಂತರು, ಜ್ಞಾನಿಗಳು ಎಂದು ನಾವು ಯಾರ ಬಗೆಗೆ ಯೋಚಿಸುತ್ತೇವೆಯೋ ಅಂತಹವರೇ ಬೃಹತ್ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಇದರ ಬಗೆಗೆ ನಾವೆಲ್ಲರೂ ಗಾಢವಾಗಿ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.

ವಿಜ್ಞಾನದ ಅಭಿವೃದ್ಧಿ ಬಹುಮುಖಗಳಲ್ಲಿ ನಮಗೆ ಸಹಕಾರಿಯಾಗಿ ಒದಗಿಬರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ವಿಜ್ಞಾನ ನಮ್ಮನ್ನು ಮಾನವರ ಬದಲಾಗಿ ಯಂತ್ರಗಳನ್ನಾಗಿಸುತ್ತಿದೆ ಎಂಬ ಆತಂಕ ಕಾಡುತ್ತದೆ. ನಮ್ಮ ದೇಹದ ಯಾವುದೇ ಅಂಗಗಳನ್ನು ಬದಲಾಯಿಸುವ ಅವಕಾಶವನ್ನು ವಿಜ್ಞಾನ ಒದಗಿಸಿದೆ. ಇದರಿಂದಾಗಿ ಮನುಷ್ಯನೂ ಒಂದು ಯಂತ್ರ ಅನ್ನುವಂತಾಗಿದೆ. ಪರಿಣಾಮ ನಮ್ಮ ಪರಿಸರದೆಡೆಗೆ ನಮಗಿರಬೇಕಿದ್ದ ಪ್ರೀತಿ ಅಧಿಕಾರವಾಗಿ ಮಾರ್ಪಾಡಾಗಿದೆ. ಆದರೆ ಪ್ರಕೃತಿಯ ಸತ್ವದ ಮುಂದೆ ನಮ್ಮ ಸಾಮರ್ಥ್ಯ ಏನೇನೂ ಅಲ್ಲ ಎಂಬುದನ್ನು ಮನಗಾಣಬೇಕು ಎಂದು ನುಡಿದರು.

ಪಾಶ್ಚಾತ್ಯ ರಾಷ್ಟ್ರಗಳ ಮಂದಿಗೆ ವಸುಧೈವ ಕುಟುಂಬಕಂ ಕಲ್ಪನೆಯನ್ನು ಬಿತ್ತಿದ ಸ್ವಾಮಿ ವಿವೇಕಾನಂದರು ಈ ದೇಶದ ಮಂದಿಗೂ ಸೇವೆಯ ಮಹತ್ವದ ಬಗೆಗೆ ತಿಳಿಹೇಳಿದ್ದಾರೆ. ದೇಶ ಸೇವೆಯ ಕನಸಿನೊಂದಿಗೆ ಸ್ಪಷ್ಟ ಧ್ಯೇಯ ಹಾಗೂ ದೂರದೃಷ್ಟಿಯಿಂದ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದಾಗ ಮಾನವ ಜೀವನ ಸಾರ್ಥಕಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಆಶಯಗಳು ಮನೆಮಾಡಿದಾಗ ಯೋಗ್ಯ ನಾಗರಿಕ ರೂಪುಗೊಳ್ಳುತ್ತಾನೆ ಎಂದರು.

ಈ ಸಂದರ್ಭದಲ್ಲಿ ಈಶ್ವರಮಂಗಲದ ಹನುಮಗಿರಿಯ ಧರ್ಮಶ್ರೀ ಪ್ರತಿಷ್ಟಾನದ ವತಿಯಿಂದ ಧರ್ಮಶ್ರೀ ಪ್ರಶಸ್ತಿಯನ್ನು ಡಾ.ಮುರಳಿ ಮನೋಹರ ಜೋಶಿಯವರಿಗೆ ಪ್ರದಾನ ಮಾಡಲಾತು. ಅಂತೆಯೇ ಕಾಲೇಜಿನ ಸುವರ್ಣ ಮಹೋತ್ಸವದ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.

       ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ವ್ಯಕ್ತಿಯೊಬ್ಬನಿಗೆ ಐವತ್ತು ವರ್ಷ ವಯಸ್ಸಾಗುವುದು ವೃದ್ಧಾಪ್ಯದ ಸಂಕೇತವಾದರೆ ಸಂಸ್ಥೆಯೊಂದರ ಐವತ್ತನೇ ವರ್ಷ ಚಿರಂಜೀವಿತ್ವದ ಸಂಕೇತ. ಸಾವಿರಾರು ಮಕ್ಕಳನ್ನು ಹಡೆದರೂ ವೃದ್ಧೆಯಾಗದ ತಾಯಿ ಎಂದರೆ ಆಕೆ ವಿದ್ಯಾಸಂಸ್ಥೆ. ವಿದ್ಯಾರ್ಥಿಗಳು ಪ್ರತಿ ಜೀವಿಯ ಬಗೆಗೂ ಪ್ರೇಮದ ಸುಧೆ ಹರಿಸುವುದನ್ನು ಕಲಿಯಬೇಕು. ಈಗ ಪ್ರಾಣಿ, ಮರಗಿಡಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಆದರೆ ದಾಳಿಯ ಬದಲಾಗಿ ಪ್ರೀತಿಯನ್ನು ತೋರಬೇಕು. ಈಶ ಪ್ರೇಮ ಮತ್ತು ದೇಶ ಪ್ರೇಮ ಇಂದಿನ ಅಗತ್ಯ ಎಂದರು.

       ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಕಾರ್ಯದರ್ಶಿ ಶಿವಪ್ರಸಾದ್ ಇ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿ.ವಿ.ಭಟ್, ಕಾಲೇಜಿನ ಸಂಚಾಲಕ ಜಯರಾಮ ಭಟ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್‌ದಾಸ್ ಎ ಹಾಗೂ ಧರ್ಮಶ್ರೀ ಪ್ರತಿಷ್ಟಾನದ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸ್ಮಿತಾ ಮಾಧವಿ, ಸೃಜನಶ್ರೀ, ಶೃತಿ, ಶ್ರೀದೇವಿ, ನಿಶಾ ಹಾಗೂ ಸುಕನ್ಯಾ ಆಚಾರ್ಯ ಪ್ರಾರ್ಥಿಸಿದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಸ್ವಾಗತಿಸಿದರು.  ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಪ್ರಸ್ತಾವನೆಗೈದರು. ಧರ್ಮಶ್ರೀ ಪ್ರತಿಷ್ಟಾನದ ನನ್ಯ ಅಚ್ಯುತ ಮೂಡಿತ್ತಾಯ ಧರ್ಮಶ್ರೀ ಪ್ರಶಸ್ತಿಯ ಬಗೆಗೆ ಮಾಹಿತಿ ನೀಡಿದರು. ಸುವರ್ಣ ಮಹೋತ್ಸವ ಸಮಿತಿಯ ಮುಖ್ಯ ಕಾರ್ಯದರ್ಶಿ ಪ್ರೊ.ಎ.ವಿ.ನಾರಾಯಣ ವಂದಿಸಿದರು. ಉಪನ್ಯಾಸಕಿಯರಾದ ಸರಸ್ವತಿ ಸಿ.ಕೆ ಹಾಗೂ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.