ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಬೆಳವಣಿಗೆಯಾಗಬೇಕು: ಡಾ. ಮಾಧವ ಭಟ್
ಪುತ್ತೂರು: ವಿಶ್ವವಿದ್ಯಾನಿಲಯ ಮಟ್ಟದ ಸರಾಸರಿ ಫಲಿತಾಂಶಕ್ಕಿಂತ ಹೆಚ್ಚು ಫಲಿತಾಂಶವನ್ನು ಪಡೆದ ಹೆಮ್ಮೆ ವಿವೇಕಾನಂದ ಕಾಲೇಜಿನದ್ದು. ಅಧ್ಯಾಪನ, ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ತರುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಸಂಸ್ಕಾರ ಮನೆಯಲ್ಲಿ ಸಿಗುವುದರೊಂದಿಗೆ ವಿದ್ಯಾಸಂಸ್ಥೆಗಳೂ ನೀಡಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್. ಮಾದವ ಭಟ್ ಹೇಳಿದರು
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಶನಿವಾರ ಪಾಲ್ಗೊಂಡು ಪ್ರಾಸ್ತಾವಿಕವಾದ ಮಾತುಗಳನ್ನಾಡಿದರು.
ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಜೊತೆ ರಕ್ಷಕರು ಕೈ ಜೋಡಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಸಾಧನೆಯ ಜೊತೆಗಿದ್ದದ್ದು ಮಾತ್ರವಲ್ಲದೇ ಉತ್ತಮ ಸಂಸ್ಕಾರವನ್ನು ನೀಡಿದ ಹೆಮ್ಮೆ ನಮ್ಮದಾಗಲಿದೆ. ಕಾಲೇಜಿನ ಸುವರ್ಣ ಮಹೋತ್ಸವದ ಈ ವರ್ಷ ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಸುವರ್ಣ ಅವಕಾಶ ದೊರಕಿದೆ ಎಂದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಿರಿಯ ವಿದ್ಯಾರ್ಥಿಗಳು, ಹೆತ್ತವರು, ಸ್ನೇಹಿತರೆಲ್ಲರೂ ಒಟ್ಟಾಗಿ ಸೇರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಭಟ್.ಕೆ ಮಾತನಾಡಿ ಉತ್ತಮ ಗುಣಮಟ್ಟದ ಶಿಕ್ಷಣ ವಿವೇಕಾನಂದ ಕಾಲೇಜು ಹೆಸರುವಾಸಿಯಾಗಲು ಮುಖ್ಯ ಕಾರಣ. ಕಾಲೇಜಿನ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸಬೇಕು. ಇದಕ್ಕಾಗಿ ಹೆತ್ತವರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದರಲ್ಲದೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಜತೆಗೂಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರತರುವ ವಿಕಸನ ಪತ್ರಿಕೆಯ ವಿಶೇಷ ಸಂಚಿಕೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ| ಎ.ವಿ. ನಾರಾಯಣ ಬಿಡುಗಡೆ ಮಾಡಿದರು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಶ್ರೀಕೃಷ್ಣ ಗಣರಾಜ ಭಟ್ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯನ್ನು ನಡೆಸಿದರೆ ರಕ್ಷಕ ಶಿಕ್ಷಕ ಸಂಘದ ಖಜಾಂಚಿ ವೆಂಕಟೇಶ್ ಭಟ್ಟ್. ವಿ. ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್. ಆರ್ ರಂಗಮೂರ್ತಿ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಅಲ್ಲದೆ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಜಯಪ್ರಕಾಶ್ ರೈ, ರವಿಂದ್ರ, ಎಸ್. ಶಂಕರ ನಾರಾಯಣ ಭಟ್ಟ್, ನಾರಾಯಣ ಯಾದವ್, ಈಶ್ವರ ಭಟ್ಟ್, ನಳಿನಿ. ಎಸ್ ಭಟ್ಟ್ ಹಾಗೂ ಆಯ್ಕೆಯಾದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ| ಆನಂದ. ವಿ ಸ್ವಾಗತಿಸಿ, ಉಪನ್ಯಾಸಕಿ ಹಾಗು ವಿದ್ಯಾರ್ಥಿ ಕ್ಷೇಮಪಾಲಕಿ ರವಿಕಲಾ ವಂದಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.