ವಿದ್ಯಾಥಿಗಳು ನೂತನ ಆವಿಷ್ಕಾರಕ್ಕೆ ಆಸಕ್ತರಾಗಿರಬೇಕು: ಪ್ರವೀಣ್ ಉಡುಪ
ಪುತ್ತೂರು: ಮಾಹಿತಿ ತಂತ್ರಜ್ಞಾನವು ವಿವಿಧ ಕಾಲಘಟ್ಟದಲ್ಲಿ ಭಿನ್ನವೆಸಿಸುವ ಅಭಿವೃದ್ಧಿಯನ್ನು ಸಾಧಿಸಿದೆ. ಅರವತ್ತರ ದಶಕ, ಎಂಬತ್ತರ ದಶಕ ಹಾಗೂ ಎರಡು ಸಾವಿರನೇ ಇಸವಿಯ ಹೊತ್ತಿಗೆ ಬೇರೆ ಬೇರೆಯೇ ಮಜಲುಗಳನ್ನು ತೆರೆದುಕೊಂಡು ಪ್ರಸ್ತುತ ದೇಶದ ಅತಿಮುಖ್ಯ ಭಾಗವೆನಿಸಿದೆ ಎಂದು ಮಂಗಳೂರಿನ ಎ-೧ ಲಾಗಿಕ್ಸ್ನ ಉದ್ಯೋಗಿ ಪ್ರವೀಣ್ ಉಡುಪ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವು ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ತಂತ್ರಜ್ಞಾನ ಅಂದು – ಇಂದು ಎನ್ನುವ ವಿಚಾರವಾಗಿ ಮಾತನಾಡಿದರು.
ಹೊಸದಾಗಿ ಉದ್ಯೋಗಕ್ಕೆ ಅಡಿಯಿಡುವ ವಿದ್ಯಾರ್ಥಿಗಳು ತಾವು ಕೆಲಸ ಮಾಡುವ ಸಂಸ್ಥೆಯಲ್ಲಿ ನೂತನ ಅವಿಷ್ಕಾರ ಮಾಡುವುದಕ್ಕೆ ಆಸಕ್ತಿ ಹೊಂದಿರಬೇಕು. ಪ್ರತಿ ನಿತ್ಯವೂ ಹೊಸ ಹೊಸತನ್ನು ಅಧ್ಯಯನ ಮಾಡುವ ಉತ್ಸಾಹವನ್ನು ಹೊಂದಿರಬೇಕು. ಆಗ ಮಾತ್ರ ಯಾವುದೇ ಒಂದು ಸಾಧನೆಯನ್ನು ಮಾಡಲು ಸಾಧ್ಯ. ಆದ್ದರಿಂದ ವಿದ್ಯಾಥಿಗಳು ಸಾಧಿಸುವ ಹಟದಲ್ಲಿ ಮುಂದುವರಿಯಬೇಕು ಎಂದು ನುಡಿದರು.
ಸಾಮಾಜಿಕ ತಾಣಗಳು ಇಂದು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. ಅವುಗಳನ್ನು ಅಭಿವೃದ್ಧಿ ಪಡಿಸುವ ಬಗೆಗೆ ಜ್ಞಾನವಿರಬೇಕು. ಅಂತೆಯೇ ಹ್ಯಾಕಿಂಗ್ ತಡೆಯುವ ಬಗೆಗೂ ಜಾಗೃತರಾಗಿರಬೇಕು. ಪ್ರಸ್ತುತ ಸಾಮಾಜಿಕ ತಾಣಗಳಲ್ಲಿ ಹೊಸ ಹೊಸತನ್ನು ಹೊಸೆಯುವ ಅವಕಾಶವಿದೆ. ಈ ಬಗೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರಲ್ಲದೆ ಇಂದು ಯಾವುದೇ ಸಂಸ್ಥೆಗೆ ಹೋದರೂ ಅಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿರುವುದನ್ನು ಕಾಣಬಹುದು ಎಂದು ನುಡಿದರು.
ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾಥಿ ನಂದನ್ ಸ್ವಾಗತಿಸಿದರು. ವಿದ್ಯಾಥಿ ಸಚಿನ್ ಮಲ್ಲಾರ್ ವಂದಿಸಿದರು.