ಇತಿಹಾಸಕ್ಕೆ ವಿಜ್ಞಾನ ಅಗತ್ಯ : ವಿ.ವಿ ಭಟ್
ಪುತ್ತೂರು: ಚರಿತ್ರೆಯನ್ನು ಒಳಗೊಂಡಂತೆ ಇತರ ಯಾವುದೇ ವಿಷಯಗಳಿಗೆ ಇನ್ನೊಂದು ವಿಷಯದ ಬೆಂಬಲ ಅವಶ್ಯಕವಾಗಿದೆ. ಆ ಹಿನ್ನಲೆಯಲ್ಲಿ ಕೇವಲ ಒಂದು ವಿಷಯಕ್ಕೆ ಮಾತ್ರ ಅಂಟಿಕೊಳ್ಳದೆ ಇತರ ವಿಷಯಗಳ ಬಗೆಗಿನ ಜ್ಞಾನವೂ ಅಗತ್ಯ. ಅದಕ್ಕಾಗಿ ಚರಿತ್ರೆಯನ್ನು ಅಭ್ಯಸಿಸುವ ವಿದ್ಯಾರ್ಥಿಗಳು ವಿಜ್ಞಾನದ ಕುರಿತಾಗಿ ಅನೇಕಾನೇಕ ಮಾಹಿತಿಗಳನ್ನು ತಿಳಿದು ಕೊಂಡಿರಬೇಕು. ಚರಿತ್ರೆಯ ರಚನೆ ಮತ್ತು ಪುನರ್ ರಚನೆಗೆ ವಿಜ್ಞಾನ ಅವಶ್ಯಕ ಎಂದು ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ವಿ. ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಹೆರಿಟೇಜ್ ಕ್ಲಬ್ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತಿಹಾಸದ ರಚನೆ ಮತ್ತು ಪುನರ್ರಚನೆಯಲ್ಲಿ ವಿಜ್ಞಾನದ ತಂತ್ರಜ್ಞಾನ ಎಂಬ ವಿಷಯದ ಕುರಿತಾಗಿ ಗುರುವಾರ ಮಾತನಾಡಿದರು.
ಚರಿತ್ರೆಯನ್ನು ಅನ್ವೇಷಣೆ ಮಾಡುವಾಗ ಹಳೆಯ ವಿಧಾನಗಳು ಇದ್ದರೂ ವಿಜ್ಞಾನದ ಹೊಸ ತಂತ್ರಜ್ಞಾನಗಳು ಇರುವಾಗ ಅದನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಬೇಕು. ಆ ಮೂಲಕ ಇತಿಹಾಸವನ್ನು ಎಲ್ಲಾ ಮಗ್ಗಲುಗಳಿಂದ ಅಧ್ಯಯನ ಮಾಡಬೇಕು. ಈ ತೆರೆನಾದ ಅಧ್ಯಯನದಿಂದ ಇತಿಹಾಸ ಬಹುಮುಖಿಯಾಗಿ ಬೆಳವಣಿಗೆಯನ್ನು ಹೊಂದಲು ಸಾಧ್ಯವಾಗಬಲ್ಲುದು. ರಾಜರ ದೃಷ್ಟಿಯಿಂದ ಮುಖ್ಯವಾಗುವ ಚರಿತ್ರೆಯನ್ನು ಕೃಷಿಕನ, ಶ್ರೀ ಸಾಮಾನ್ಯನ ದೃಷ್ಠಿಯಿಂದಲೂ ತರ್ಕಿಸಬೇಕು ಎಂದರು.
ವಿಜ್ಞಾನದ ತಂತ್ರಜ್ಞಾನದಲ್ಲಿ ಒಂದಾಗಿರುವ ರಿಮೋಟ್ ಸೆನ್ಸ್ ಇಮೇಜರಿಯ ಸಹಾಯದಿಂದಲಾಗಿ ಭೂಗರ್ಭದಲ್ಲಿ ಹುದುಗಿ ಹೋಗಿರುವ ಐತಿಹಾಸಿಕ ವಸ್ತುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ಇದು ಭೂಮಿಯ ಉಷ್ಣತೆಯನ್ನು ಪರಿಶೀಲಿಸಿ ತಿಳಿಸುತ್ತದೆ. ಇದರ ಸಹಾಯದಿಂದಲಾಗಿಯೇ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸರಸ್ವತಿ ನದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿದ್ದರು. ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ನಾಕ್ ಸ್ವಾಗತಿಸಿ, ಉಪನ್ಯಾಸಕಿ ವಿಜಯಲಕ್ಷ್ಮೀ ಸ್ಮರಣಿಕೆ ನೀಡಿದರು. ವಿದ್ಯಾರ್ಥಿನಿ ಶೃತಿ ಟಿ.ಎಸ್ ನಿರೂಪಿಸಿ, ದಿನೇಶ್ ವಂದಿಸಿದರು.