ವಿವೇಕಾನಂದ ಆವರಣದಲ್ಲಿ ಗೋ ಕಥಾ ಕಿರಣ
ಪುತ್ತೂರು: ಹೆತ್ತ ಮಾತೆ, ಹೊತ್ತ ಮಾತೆ ಹಾಗೂ ಗೋಮಾತೆಯ ನಡುವೆ ಅವಿಚ್ಛಿನ್ನತೆ ಇದ್ದಾಗ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ. ಗೋ ಮಾತೆ ಹೆತ್ತವಳಿಗೂ ಉಣಿಸಿದವಳು. ಹೊತ್ತವಳಿಗೂ ಬಡಿಸಿದವಳು. ಅಂತಹ ಶ್ರೇಷ್ಟ ತಾಯಿ ಗೋವು. ಆದ್ದರಿಂದಲೇ ಗೋವು ಸರ್ವಶ್ರೇಷ್ಟವೆನಿಸಿಕೊಂಡಿರುವುದು ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ೧೫೦ನೇ ವರ್ಷಾಚರಣೆಯ ಸಮಾರೋಪ ಸಮಾರಂಭ ಹಾಗೂ ವಿವೇಕಾನಂದ ಜಯಂತಿಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಗೋ ಕಥಾ ಕಿರಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಾನು ಬದುಕಬಹುದು, ನೀನು ಬದುಕಬಹುದು ಆದರೆ ಗೋವಿಗೆ ಬದುಕುವ ಹಕ್ಕು ಇಲ್ಲವೇ? ಈ ಪ್ರಶ್ನೆ ಕಸಾಯಿಖಾನೆಗಳಿಗೂ ಅನ್ವಯವಾಗುವಂತಹದ್ದು. ಮಾತ್ರವಲ್ಲ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದಂತಹದ್ದು. ಹಸುವನ್ನು ಕೊಲ್ಲುವವನೂ ಹಸುವಿನ ಹಾಲು ಕುಡಿದೇ ಬೆಳೆದವನು. ಹಾಗಾಗಿ ಗೋವು ಎಲ್ಲರಿಗೂ ತಾಯಿ. ಸಮಾಜದಲ್ಲಿ ಎಲ್ಲಾ ಜೀವಿಗಳಿಗೂ ಜೀವಿಸುವ ಹಕ್ಕಿದೆ ಎಂಬುದನ್ನು ಯಾರೂ ಮರೆಯಬಾರದು. ಅಲ್ಲದೆ ಹಸು ಹಾಗೂ ಕರುವಿನ ಬಾಂಧವ್ಯ ಪ್ರತಿಯೊಬ್ಬ ತಾಯಿ ಮಗುವಿಗೂ ಮಾದರಿ. ಇಂದು ದೇಸೀಯ ಗೋವಿಗಿಂತ ವಿದೇಶೀ ಗೋವೇ ನಮಗೆ ಆಪ್ತವಾಗುತ್ತಿದೆ. ಆದ್ದರಿಂದಲೇ ನಮ್ಮ ಸಂಬಂಧಗಳೂ ವಿದೇಶೀ ಸಂಬಂಧಗಳಷ್ಟೇ ತೆಳುವಾಗುತ್ತಿದೆ ಎಂದರು.
ಯಾರು ಬದುಕಿದರೆ ನೂರಾರು ಮಂದಿ, ಸಾವಿರಾರು ಮಂದಿ ಸಂತೋಷಕ್ಕೆ ಒಳಗಾಗುತ್ತಾರೋ ಅಂತಹವರಿಗೆ ಬದುಕುವ ಹಕ್ಕು ಹೆಚ್ಚು. ಆದ್ದರಿಂದಲೇ ಮನುಷ್ಯರಿಗಿಂತಲೂ ಗೋವಗಳಿಗೇ ಬದುಕುವ ಅರ್ಹತೆ ಹೆಚ್ಚಿದೆ ಎಂಬುದನ್ನು ಮರೆಯಬಾರದು. ಪ್ರಸ್ತುತ ಹಸುಗಳ ಮಾರಣಹೋಮ ನಡೆಯುತ್ತಿದೆ. ಹಸುವಿನ ರಕ್ತ ಭೂಮಿಗೆ ಬಿದ್ದರೆ ಅದು ಸಮಾಜದ ಅವಸಾನಕ್ಕೆ ಮುನ್ನುಡಿ. ಗೋವಿನ ಸಾವು ನಮ್ಮೆಲ್ಲರ ಸಾವು. ಹಿಂದೆ ಮಾಲೋಜಿ ಅನ್ನುವ ಅರಸುಕುಮಾರ ಗೋವಿನ ಕರುವನ್ನು ಕೊಂದಾಗ ಆತನಿಗೆ ಶಿಕ್ಷೆ ನೀಡಲು ಸ್ವತಃ ತಾಯಿ ಅಹಲ್ಯಾಬಾಯಿ ಅಡಿಯಿಟ್ಟಳು. ಇಂದು ಅಸಂಖ್ಯಾತ ಮಾಲೋಜಿಗಳು ಹಸುವಿನ ಹತ್ಯೆಯಲ್ಲಿ ತೊಡಗಿದ್ದಾರೆ ಎಂದರು.
ಇಂದಿನ ಪ್ರತಿಯೊಬ್ಬ ಆಡಳಿತಗಾರರೂ ಮಾತ್ರವಲ್ಲದೆ ಪ್ರತಿಯೊಬ್ಬ ಪ್ರಜೆಯೂ ಗೋವಿನ ನೋವನ್ನು ಅರ್ಥೈಸಿಕೊಳ್ಳಬೇಕು. ಪ್ರತಿಯೊಬ್ಬರೂ ಗೋರಕ್ಷಾದೀಕ್ಷಾಬದ್ಧರಾಗಬೇಕು ಎಂದರಲ್ಲದೆ ಮಾನವರಲ್ಲಿ ತಾಯಿ ಶ್ರೇಷ್ಟ, ಪ್ರಾಣಿಗಳಲ್ಲಿ ಗೋವು ಶ್ರೇಷ್ಟ. ಈ ಈರ್ವರು ತಾಯಿಯರಲ್ಲಿ ಯಾರು ಶ್ರೇಷ್ಟ ಅನ್ನುವ ಪ್ರಶ್ನೆಗೆ ಉತ್ತರ ಗೋ ಕಥಾ ಕಿರಣ ಎಂದು ನುಡಿದರು.
ಹಿನ್ನಲೆ ಗಾಯನದಲ್ಲಿ ಚಂದ್ರಶೇಖರ ಕೆದಿಲಾಯ, ಶಂಕರಿಮೂರ್ತಿ, ದೀಪಿಕಾ, ಉಮಾ, ಸತ್ಯಜಿತ್, ಪೌಷಾ ಭಟ್, ಪ್ರಥಮ, ಚೈತ್ರಿಕಾ ಸಹಕರಿಸಿದರು. ಕೊಳಲಿನಲ್ಲಿ ಗಣೇಶ್ ಕೆ.ಎಸ್.ಹಾರ್ಮೋನಿಯಂನಲ್ಲಿ ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ, ತಬಲದಲ್ಲಿ ಗಣೇಶ್ ಗುಂಡಿಕಲ್ ಮತ್ತು ವಯಲಿನ್ನಲ್ಲಿ ಸುಮನಾ ರಾಜು ಸಹಕರಿಸಿದರು. ಕಥಾ ಭಾಗದ ಕೊನೆಯಲ್ಲಿ ಕಲಾವಿದರಾದ ಮನೋರಮಾ, ವಿಷ್ಣುಪ್ರಸಾದ್ ನಿಡ್ಡಾಜೆ ಹಾಗೂ ತಂಡದವರಿಂದ ರೂಪಕ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಸ್ವಾಗತಿಸಿದರು. ಡಾ.ಗಜಾನನ ಶರ್ಮ ಹಾಗೂ ನ್ಯಾಯವಾದಿ ಮಹೇಶ್ ಕಜೆ ಪ್ರಸ್ತಾವಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ರವೀಂದ್ರ ಪಿ ವಂದಿಸಿದರು.